29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಾರ್ವಜನಿಕ ಬಾವಿಗಳ ಅತಿಕ್ರಮಣ ಆರೋಪ: ಲಾಯಿಲ ಪಂಚಾಯತ್‌ನಿಂದ ನಾಮಫಲಕ ಅಳವಡಿಕೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಬಳಕೆಯಲ್ಲಿರುವ ಬಾವಿಗಳನ್ನು ಅತಿಕ್ರಮಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಬಿ.ಎಲ್. ಅವರು ಗ್ರಾಮ ಪಂಚಾಯತ್‌ನ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕರ ಬಳಕೆಗೆಂದು ಇರುವ ಬಾವಿಗಳು ಕಾಲಕ್ರಮೇಣ ಖಾಸಗಿ ವ್ಯಕ್ತಿಗಳ ಸ್ವಾಧೀನಕ್ಕೆ ಒಳಗಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಅಗತ್ಯಗಳಿಗೆ ಸಾರ್ವಜನಿಕ ಬಾವಿಗಳು ಪ್ರಮುಖವಾಗಿರುವ ಹಿನ್ನೆಲೆಯಲ್ಲಿ, ಅವುಗಳ ಸಂರಕ್ಷಣೆ ಹಾಗೂ ಅತಿಕ್ರಮಣದಿಂದ ಮುಕ್ತಗೊಳಿಸುವುದು ಪಂಚಾಯತ್‌ನ ಜವಾಬ್ದಾರಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.

ಸರಕಾರಿ ಬಾವಿ ಸ್ಥಳದಲ್ಲಿ ಪಂಚಾಯತ್‌ನಿಂದ ಫಲಕ: ಸುಧಾಕರ್ ಬಿ.ಎಲ್. ಅವರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಪುತ್ರಬೈಲು ಮಸೀದಿ ಸಮೀಪದಲ್ಲಿರುವ ಬಾವಿಯ ಸ್ಥಳಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಬಾವಿ ಪಂಚಾಯತ್ ಅಧೀನದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಸ್ಥಳದಲ್ಲಿ ‘ಸಾರ್ವಜನಿಕ ಬಾವಿ’ ಗ್ರಾಮ ಪಂಚಾಯತ್ ಸುಪರ್ದಿಯಲ್ಲಿದೆ ಎಂಬ ಫಲಕವನ್ನು ಪಂಚಾಯತ್ ನಿಂದ ಅಳವಡಿಸಲಾಗಿದೆ.ಪಂಚಾಯತ್‌ನ ಈ ಕ್ರಮದಿಂದಾಗಿ ಸದರಿ ಬಾವಿ ಸಾರ್ವಜನಿಕ ಆಸ್ತಿಯಾಗಿದ್ದು, ಅದರ ಮೇಲೆ ಯಾವುದೇ ರೀತಿಯ ಖಾಸಗಿ ಹಕ್ಕು ಅಥವಾ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂಬ ಸಂದೇಶ ರವಾನೆಯಾಗಿದೆ.

ಉಳಿದ ಬಾವಿಗಳ ಬಗ್ಗೆಯೂ ದೂರು: ಲಾಯಿಲ ಗ್ರಾಮದ ಉಳಿದ ಸಾರ್ವಜನಿಕ ಬಾವಿಗಳು ಇದ್ದು ಈ ಬಗ್ಗೆಯೂ ಸುಧಾಕರ್ ಬಿ.ಎಲ್ ಮತ್ತು ಲಾಯಿಲ ನಿವಾಸಿ ಅನ್ಸಾರ್ ಎಂಬವರು ಅವರು ಲಾಯಿಲ ಗ್ರಾಮ ಪಂಚಾಯತ್‌ನ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು. ಸಾರ್ವಜನಿಕ ಬಳಕೆಗೆ ಇರುವ ಈ ಬಾವಿಯ ಜಾಗವನ್ನು ಅತಿಕ್ರಮಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ವಾಸ್ತವಾಂಶ ದೃಢಪಟ್ಟಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ಬಾವಿ ಹಾಗೂ ಅದರ ಸುತ್ತಲಿನ ಜಾಗದ ಸ್ವರೂಪವನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಅತಿಕ್ರಮಣ ನಡೆದಿರುವುದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಂಡು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕಾಗಿದೆ.

ಪಂಚಾಯತ್ ಮುಂದಿನ ನಡೆ ಕುತೂಹಲ: ಈಗಾಗಲೇ ಒಂದು ಸಾರ್ವಜನಿಕ ಬಾವಿಯ ಸ್ಥಳದಲ್ಲಿ ಪಂಚಾಯತ್ ಅಧೀನದ ಫಲಕ ಅಳವಡಿಸಿರುವುದರಿಂದ, ಉಳಿದ ಸಾರ್ವಜನಿಕ ಬಾವಿಗಳ ವಿಚಾರದಲ್ಲೂ ಪಂಚಾಯತ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ, ಅತಿಕ್ರಮಣ ತಡೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಲಭ್ಯತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.ಪುತ್ರಬೈಲು ಸೇರಿದಂತೆ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಬಾವಿಗಳ ಕುರಿತು ಬಂದಿರುವ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಿ, ದಾಖಲೆ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಂಡರೆ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಗೆ ಮತ್ತಷ್ಟು ಬಲ ಸಿಗಲಿದೆ.

Related posts

ಸೆ.3ರಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ನ್ಯಾಯಾಲದ ಆದೇಶ ಉಲ್ಲಂಘಿಸದಂತೆ – ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲು- ಸಮಾನ ಮನಸ್ಕರಿಂದ ತಹಸೀಲ್ದಾರರಿಗೆ ಮನವಿ

Suddi Udaya

ಮುಂಡಾಜೆ ಫ್ರೆಂಡ್ಸ್ ಅಮೆಚೂರ್ ಅಸೋಸಿಯೇಶನ್ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

Suddi Udaya

ಧರ್ಮಸ್ಥಳ: ಉಚಿತ ಸಾಮೂಹಿಕ ವಿವಾಹ ನೋಂದಣಿ ಕಛೇರಿ ಉದ್ಘಾಟನೆ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಚಿಣ್ಣರ ಉತ್ಸವ

Suddi Udaya

ಬ್ರಿಜೇಶ್ ಚೌಟ ಗೆಲುವು, ಉಜಿರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

Suddi Udaya

ನೆರಿಯ ನಿವಾಸಿ ಶ್ವೇತಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!