ಅಂಡಿಂಜೆ: ಗ್ರಾಮೀಣ ಭಾಗದ ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.), ಮಂಗಳೂರು ಇದರ ಸಿಇಒ ಜ್ಯೋತಿರಾಜ್ ಹೇಳಿದರು.
ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.), ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.), ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 15 ದಿನಗಳ ಆರಿ ವರ್ಕ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಲೂಕು ಪಂಚಾಯತ್ ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯತ್ ಅಂಡಿಂಜೆ ಸಹಯೋಗದಲ್ಲಿ ನಡೆದ ತರಬೇತಿ ಕಾರ್ಯಾಗಾರವು ಮಹಿಳೆಯರಿಗೆ ಆರಿ ವರ್ಕ್ ಕಲೆಯ ಕುರಿತು ಪ್ರಾಯೋಗಿಕ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸುದರ್ಶಿನಿ ಹೆಗ್ಡೆ ವಹಿಸಿದ್ದರು. ಶಿಬಿರಾರ್ಥಿಗಳು ತರಬೇತಿಯ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.
ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ, ತಾಲೂಕು ಕೃಷಿಯೇತರ ವ್ಯವಸ್ಥಾಪಕರಾದ ನಿತೀಶ್, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶುಭಲಕ್ಷ್ಮಿ ಹಾಗೂ ತರಬೇತುದಾರರಾದ ನಿಶ್ಚಿಂತ ಜೈನ್ ಅವರು ಮಾತನಾಡಿ, ತರಬೇತಿಯ ಮೂಲಕ ಪಡೆದ ಕೌಶಲ್ಯವನ್ನು ಜೀವನೋಪಾಯದ ಚಟುವಟಿಕೆಯಾಗಿ ರೂಪಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಜೀವನೋಪಾಯ ಚಟುವಟಿಕೆಗಳಿಗೆ ಸಂಬಂಧಿಸಿದ ಬ್ಯಾಂಕ್ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಕ್ಷತ ಕಾರ್ಯಕ್ರಮ ನಿರೂಪಿಸಿದರು. ವಿಂಧ್ಯ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ನಮಿತಾ ಸ್ವಾಗತಿಸಿದರು. ಯಶವಂತಿ ಧನ್ಯವಾದ ಸಮರ್ಪಿಸಿದರು.












