ಶಿಶಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಶಿಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶಿಶಿಲದ ಆಶ್ರಯದಲ್ಲಿ ಸೆ. 14ರಂದು ಶಿಶಿಲ ನಾಗನಡ್ಕ ಸಮುದಾಯ ಭವನದಲ್ಲಿ ಸಾರ್ವಜನಿಕ ಗಣೇಶೋತ್ಸವವು ಭಕ್ತಿ, ಸಂಭ್ರಮ ಹಾಗೂ ವೈಭವದಿಂದ ನಡೆಯಿತು.

ಬೆಳಗ್ಗೆ 8 ಗಂಟೆಗೆ ಶ್ರೀ ಸುಬ್ರಹ್ಮಣ್ಯ ನೆಲ್ಲಿತ್ತಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಗಣಪತಿ ದೇವರ ಪ್ರತಿಷ್ಠಾಪನೆ ನೆರವೇರಿತು. ಪ್ರತಿಷ್ಠಾಪನೆಯ ಬಳಿಕ ಶಿಶಿಲದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಭಕ್ತಿಗೀತೆ ಸ್ಪರ್ಧೆಯಲ್ಲಿ ಹಲವು ಮಂದಿ ಉತ್ಸಾಹದಿಂದ ಭಾಗವಹಿಸಿದರು.
ಶಿಶಿಲ–ಹೆವಾಜೆ–ಕೊಳ್ಕೆಬೈಲು ಶಾಲೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಜ್ಞವಾಗಿ ಮೂಡಿಬಂದವು. ಇದೇ ಸಂದರ್ಭದಲ್ಲಿ ವಿಧುಶ್ರೀ ಭರತನಾಟ್ಯ ತಂಡದ ಕಲಾವಿದರಿಂದ ನಡೆದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಧಾರ್ಮಿಕ ಉಪನ್ಯಾಸ ಹಾಗೂ ಸಭಾ ಕಾರ್ಯಕ್ರಮ
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಶಿಶಿಲದ ಅಧ್ಯಕ್ಷ ಕರುಣಾಕರ ಶಿಶಿಲ ವಹಿಸಿದ್ದರು. ಸಹಕಾರ ಭಾರತಿಯ ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ಸಂಪತ್ ಸುವರ್ಣ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ವಲಯ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ, ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷ ರಾಮ ನಾಯ್ಕ್ ಶಿಶಿಲ, ವಾಲ್ಮೀಕಿ ಆಶ್ರಮ ಶಾಲೆಯ ಅಧ್ಯಾಪಕ ಕರುಣಾಕರ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮಾಲತಿ ಹಾಗೂ ಶಿಶಿಲ ಗ್ರಾಮದ ಪವರ್‌ಮ್ಯಾನ್ ಸಂತೋಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹೆವಾಜೆ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಗಣೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶಿಲ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಸುಬ್ರಾಯ ಗೌಡ ವಂದಿಸಿದರು. ರಮೇಶ್ ಬೈರಕಟ್ಟ ಹಾಗೂ ಕುಮಾರಿ ಚಂದನ ಕಾರ್ಯಕ್ರಮ ನಿರೂಪಿಸಿದರು.
ಶಾಸಕರಿಗೆ ಗೌರವ
ಗಣೇಶೋತ್ಸವದ ಪ್ರತಿಷ್ಠಾಪನಾ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರು ಉಪಸ್ಥಿತರಿದ್ದು, ನಾಗನಡ್ಕ ಸಮುದಾಯ ಭವನಕ್ಕೆ ಮೈಕ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಕಿರಣ್ ಚಂದ್ರ ಪುಪ್ಪಗಿರಿ ಹಾಗೂ ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಗಣೇಶೋತ್ಸವಕ್ಕೆ ಶುಭ ಹಾರೈಸಿದರು.

ನಾಸಿಕ್ ಬ್ಯಾಂಡ್‌ನೊಂದಿಗೆ ಅದ್ದೂರಿ ಮೆರವಣಿಗೆ
ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿ ಸಂಜೆ ಬೈರಗಿ ತಂಡ, ಉಜಿರೆ ಇವರ ನಾಸಿಕ್ ಬ್ಯಾಂಡ್‌ನೊಂದಿಗೆ ಅದ್ದೂರಿ ಗಣಪತಿ ಮೆರವಣಿಗೆ ನಡೆಯಿತು. ಶ್ರೀ ಚಾಮುಂಡೇಶ್ವರಿ ಯುವಕ ಮಂಡಳ, ವೈಕುಂಠಪುರ ಶಿಶಿಲ ಇವರ ವತಿಯಿಂದ ನಡೆದ ಆಕರ್ಷಕ ಕರಡಿ ಕುಣಿತ ಹಾಗೂ ಗೋಣಿ ಬಾಯ್ಸ್ ಡ್ಯಾನ್ಸ್ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಮೆರವಣಿಗೆಯಲ್ಲಿ ಶಿಶಿಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಉಮ್ಮಂತಿಮಾರು ಭಾಗದಿಂದ ಆರಂಭಗೊಂಡ ಗಣಪತಿ ದೇವರ ಮೆರವಣಿಗೆ ವಿವಿಧ ವಾದ್ಯವೃಂದ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಾಗಿಬಂದು ಮಿನಗುಂಡಿಯಲ್ಲಿ ಗಣಪತಿ ದೇವರ ವಿಸರ್ಜನೆ ನೆರವೇರಿಸಲಾಯಿತು.
ದಿನವಿಡೀ ನಡೆದ ಧಾರ್ಮಿಕ, ಭಜನಾ, ಸಾಂಸ್ಕೃತಿಕ, ಭಕ್ತಿಗೀತೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಭಕ್ತಿ, ಸಂಸ್ಕೃತಿ, ಸಂಭ್ರಮ ಹಾಗೂ ಸಾಮಾಜಿಕ ಒಗ್ಗಟ್ಟಿನ ಸಂದೇಶ ಸಾರಿದ ಶಿಶಿಲದ ಸಾರ್ವಜನಿಕ ಗಣೇಶೋತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು.











