ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಂಗ್ಲ ಮಾಧ್ಯಮ ಶಾಲೆಯಲ್ಲಿ (ರಾಜ್ಯ ಪಠ್ಯಕ್ರಮ) ಜೂನಿಯರ್ ರೆಡ್ ಕ್ರಾಸ್ ಘಟಕ ಹಾಗೂ ಕ್ರೀಡಾ ಸಂಘದ ಜಂಟಿ ಆಶ್ರಯದಲ್ಲಿ ‘ಸೇಫ್ಟಿ ಫಸ್ಟ್ ಅಭಿಯಾನ ಎಂಬ ವಿಶೇಷ ಸುರಕ್ಷತಾ ಜಾಗೃತಿ ಕಾರ್ಯಕ್ರಮವು ಇಂದು ಜರುಗಿತು.
ವಿದ್ಯಾರ್ಥಿಗಳಲ್ಲಿ ಸುರಕ್ಷತಾ ಪ್ರಜ್ಞೆ ಮೂಡಿಸುವುದು ಹಾಗೂ ತುರ್ತು ಪರಿಸ್ಥಿತಿಗಳನ್ನು ಧೈರ್ಯ ಮತ್ತು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರಿನ ವೃತ್ತಿಪರ ಅಗ್ನಿ ಮತ್ತು ಸುರಕ್ಷತಾ ಅಧಿಕಾರಿ (OSHA Card Holder) ಶ್ರೀ ಸತ್ಯರಾಜ್ ಅವರು ಭಾಗವಹಿಸಿ, ಸುರಕ್ಷತೆಯ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು. ಈ ವೇಳೆ ಅಗ್ನಿ ಅವಘಡಗಳ ತಡೆಗಟ್ಟುವಿಕೆ, ಅಗ್ನಿಶಾಮಕ ಉಪಕರಣಗಳ ಬಳಕೆಯ ಸುರಕ್ಷಿತ ವಿಧಾನಗಳು, ಪ್ರಥಮ ಚಿಕಿತ್ಸೆ, ಸಿಪಿಆರ್ (CPR) ಪ್ರಕ್ರಿಯೆ, ವಿಪತ್ತು ನಿರ್ವಹಣೆ ಹಾಗೂ ತುರ್ತು ಸಂದರ್ಭಗಳಿಗೆ ಸಿದ್ಧರಾಗುವ ಕುರಿತು ಪ್ರಾಯೋಗಿಕ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವು “ಸುರಕ್ಷಿತ ವ್ಯಕ್ತಿಗಳು – ಉತ್ತಮ ಭವಿಷ್ಯ” ಎಂಬ ಸಂದೇಶದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಜೂನಿಯರ್ ರೆಡ್ ಕ್ರಾಸ್ ಘಟಕವು ಸಂಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಕ್ಷರ್ ಸ್ವಾಗತಿಸಿ, ಆದ್ಯತ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸ್ಪೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರೆ, ನೀರಜಾ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.











