ಮಂಗಳೂರು : ತುಳು ಭಾಷೆಗೆ ಅಧಿಕೃತ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯ ಮಾನ್ಯತೆ ದೊರೆತಿರುವುದು ಸಮಸ್ತ ತುಳುನಾಡಿನ ಜನತೆಗೆ ಹಾಗೂ ಭಾಷಾ ಪ್ರೇಮಿಗಳಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ವಿಷಯ ಎಂದು ತುಳುವ ಮಹಾಸಭೆ ಇಂಟರ್ನ್ಯಾಷನಲ್ ದಕ್ಷಿಣ ಕನ್ನಡ ಅಧ್ಯಕ್ಷರಾದ ಶಿವಪ್ರಸಾದ್ ಅಜಿಲರು ತಿಳಿಸಿದ್ದಾರೆ.
ಶತಮಾನಗಳ ಇತಿಹಾಸ, ಶ್ರೀಮಂತ ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ಹೊಂದಿರುವ ತುಳು ಭಾಷೆಯ ಈ ಐತಿಹಾಸಿಕ ಮೈಲಿಗಲ್ಲು ಕರಾವಳಿಯ ಜನತೆಯ ದಶಕಗಳ ಕನಸನ್ನು ನನಸು ಮಾಡಿದೆ.ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ ಸಾಹಿತಿಗಳು, ತುಳು ಒಕ್ಕೂಟಗಳು, ಸಾಂಸ್ಕೃತಿಕ ನಾಯಕರು ಮತ್ತು ಹೋರಾಟಗಾರರ ಶ್ರಮ ಅಪಾರವಾದದ್ದು.ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿ, ನಿರ್ಧಾರ ಕೈಗೊಂಡ ಸನ್ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸದಸ್ಯರು ಹಾಗೂ ಈ ವಿಷಯವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ಕರಾವಳಿ ಭಾಗದ ಜನಪ್ರತಿನಿಧಿಗಳು ಅಭಿನಂದನೆಗಳಿಗೆ ಸಂಪೂರ್ಣ ಅರ್ಹರು ಎಂದು ಶಿವಪ್ರಸಾದ್ ಅಜಿಲರು ತಿಳಿಸಿದ್ದಾರೆ.
ತುಳು ಭಾಷೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗಮನಕ್ಕೆ ತರುವಂತೆ ಈ ಹಿಂದೆ ವಿಶ್ವ ತುಳು ಸಮ್ಮೇಳನವನ್ನು ಸಂಘಟಿಸಿದ ಶಿಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಆದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಹಾಗೂ ದುಬೈನಲ್ಲಿ ವಿಶ್ವ ತುಳು ಸಮ್ಮೇಳನವನ್ನು ಸಂಘಟಿಸಿದ ಮಾನ್ಯ ಸರ್ವೋತ್ತಮ್ ಶೆಟ್ಟಿ ಅವರನ್ನು ಕೂಡ ನಾನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತಿದ್ದೇನೆ. 2028ಕ್ಕೆ ವಿಶ್ವ ತುಳು ಸಂಘಟನೆಯ ನೂರನೇ ವರ್ಷ ಆಚರಣೆಯು ಬಹಳ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ.











