ಕುತ್ಲೂರು: ಕುತ್ಲೂರಿನಲ್ಲಿ 12ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಕ್ರೀಡೆ, ವೈದ್ಯಕೀಯ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರನ್ನು ಗುರುತಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ನಿಶ್ಕ್ ಹರೀಶ್ ಸಾಲ್ಯಾನ್ – ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಐಸ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದು ಕುತ್ಲೂರಿಗೆ ಕೀರ್ತಿ ತಂದಿದ್ದಾರೆ. ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ 50ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾರೆ.
ಡಾ. ಪ್ರಸಾದ್ ಬಿ. ಶೆಟ್ಟಿ ಅವರನ್ನು ವೈದ್ಯಕೀಯ ಸೇವೆಯಲ್ಲಿನ ಸಾಧನೆ ಹಾಗೂ ಸಮಾಜಮುಖಿ ಕೊಡುಗೆಗಾಗಿ, ಡಾ. ದೀಕ್ಷಿತಾ ಅವರನ್ನು ವೈದ್ಯಕೀಯ ಜ್ಞಾನ, ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಸೇವಾ ಮನೋಭಾವಕ್ಕಾಗಿ, ಶ್ರೀಮತಿ ಶಾರದಾ ತುಳುನಾಡ್ ಅವರನ್ನು ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಕೊಡುಗೆಗಾಗಿ ಹಾಗೂ ಶ್ರೀಮತಿ ಶ್ವೇತಾ ದಿಲೀಪ್ ಕುತ್ಲೂರು ಅವರನ್ನು ಸಾಹಿತ್ಯ, ಸಮಾಜಸೇವೆ ಮತ್ತು ಧಾರ್ಮಿಕ ಜಾಗೃತಿಯ ಕ್ಷೇತ್ರಗಳಲ್ಲಿನ ಸೇವೆಗಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಣ್ಣ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಭೋಜಪ್ಪ ಗೌಡ ಸುಳ್ಕೇರಿ ಮೊಗ್ರು, ಶ್ರೀ ಕೆ. ಶಶಿಕಾಂತ್ ಅರಿಗ ಹಾಗೂ ಶ್ರೀ ಸತೀಶ್ ಪಡಿವಾಳ್ ಉಪಸ್ಥಿತರಿದ್ದರು.
ಸುಶ್ಮಿತಾ, ಶ್ರೀಶಾ, ಸಿಂಚನ ಪ್ರಾರ್ಥಿಸಿದರು. ಜಯನಂದ ದೇವಾಡಿಗ ಸ್ವಾಗತಿಸಿದರು. ಹರೀಶ್, ಶ್ರೀ ಹರ್ಷ ವಂದಿಸಿದರು. ಸತೀಶ್, ಸಮೃದ್ಧಿ ನಿರೂಪಿಸಿದರು. ಸನ್ಮಾನಿತರ ಪರವಾಗಿ ಡಾ. ಪ್ರಸಾದ್ ಬಿ. ಶೆಟ್ಟಿ ಅವರು ಮಾತನಾಡಿದರು.











