28.6 C
ಪುತ್ತೂರು, ಬೆಳ್ತಂಗಡಿ
September 19, 2026
ಚಿತ್ರ ವರದಿಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಶುಭಾರಂಭ

ಸೆ.21: ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟನೆ-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿ ನಿರ್ಮಿಸಲಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೆಪ್ಟೆಂಬರ್ 21ರಂದು ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಪರಂಪರೆಗೆ ವೈದ್ಯಕೀಯ ಶಿಕ್ಷಣದ ಸೇರ್ಪಡೆಯಾಗಿರುವ ಈ ಸಂಸ್ಥೆಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಕರುಣೆ ಮತ್ತು ಸಮಾಜಮುಖಿ ಸೇವಾ ಮನೋಭಾವ ಬೆಳೆಸುವ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಗತ್ಯ ಮಾನದಂಡಗಳನ್ನು ಪೂರೈಸುವುದರೊಂದಿಗೆ, ಹಲವು ವಿಭಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕಲಾತ್ಮಕ ಹಾಗೂ ಹಸಿರು ಪರಿಸರ
ಮಿಜಾರಿನ ವಿಶಾಲ ಆವರಣದಲ್ಲಿ ನಿರ್ಮಿಸಲಾಗಿರುವ ವೈದ್ಯಕೀಯ ಕಾಲೇಜು ಕಲಾತ್ಮಕ ವಿನ್ಯಾಸ ಮತ್ತು ಆಧ್ಯಾತ್ಮಿಕ ಸ್ಪರ್ಶದೊಂದಿಗೆ ರೂಪುಗೊಂಡಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ವಾತಾವರಣದ ಅನುಭವ ಪಡೆಯುವಂತೆ ಕ್ಯಾಂಪಸ್‌ನ್ನು ವಿನ್ಯಾಸಗೊಳಿಸಲಾಗಿದೆ. ಕಾಲೇಜಿನ ವಿವಿಧ ವಿಭಾಗಗಳು, ವಿಶಾಲ ತರಗತಿ ಕೊಠಡಿಗಳು, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸಭಾಂಗಣ ಹಾಗೂ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಅನುಕೂಲವಾಗುವಂತೆ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶಾಲ ಗ್ರಂಥಾಲಯವನ್ನು ನಿರ್ಮಿಸಲಾಗಿದೆ.

ಕ್ಯಾಂಪಸ್‌ನ ಮುಂಭಾಗವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿರುವುದರ ಜೊತೆಗೆ ಹಿಂಭಾಗದಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಡೀ ಪರಿಸರದಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಎಲ್ಲಾ ವಿಭಾಗಗಳಲ್ಲೂ ಅನುಭವಿ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ಆಧುನಿಕ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಿಜಾರಿನಲ್ಲಿ 650 ಹಾಸಿಗೆಯ ಪ್ರತ್ಯೇಕ ಆಸ್ಪತ್ರೆಯನ್ನು ಕಟ್ಟುವ ಯೋಜನೆ ಇದೆ.

650 ಹಾಸಿಗೆಗಳ ಆಳ್ವಾಸ್ ಹೆಲ್ತ್ ಸೆಂಟರ್– ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿಗೆ ಬಲ
ಬಡವರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಡಾ. ಎಂ. ಮೋಹನ್ ಆಳ್ವ ಅವರ ಪರಿಕಲ್ಪನೆಯಂತೆ 1986ರಲ್ಲಿ ಆರಂಭಗೊAಡ ಆಳ್ವಾಸ್ ಹೆಲ್ತ್ ಸೆಂಟರ್ (ಎಎಚ್‌ಸಿ) ಇಂದು 650 ಹಾಸಿಗೆಗಳ ಬಹುಶಿಸ್ತೀಯ ಆಸ್ಪತ್ರೆಯಾಗಿ ಬೆಳೆದಿದೆ. ಪ್ರತಿದಿನ ಸುಮಾರು 800ರಿಂದ 1,000 ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಇದು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ವ್ಯಾಪಕ ಕ್ಲಿನಿಕಲ್ ತರಬೇತಿ ಮತ್ತು ಪ್ರಾಯೋಗಿಕ ಅನುಭವ ಪಡೆಯಲು ನೆರವಾಗಲಿದೆ.

ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆಗೆ ಸಮರ್ಪಿತ ಕಾರ್ಡಿಯಾಕ್ ಸೆಂಟರ್, ಕ್ಯಾಥ್ ಲ್ಯಾಬ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ 24*7 ಸೇವೆ ಲಭ್ಯವಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಅರ್ಹ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ಸೌಲಭ್ಯವೂ ಲಭ್ಯವಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳಿವೆ.

ತುಳು ಭಾಷಿಕರಿಗೆ 54 ಎಂಬಿಬಿಎಸ್ ಸೀಟು
2026–27ನೇ ಶೈಕ್ಷಣಿಕ ವರ್ಷಕ್ಕೆ ಕಾಲೇಜಿಗೆ 150 ಎಂಬಿಬಿಎಸ್ ಸೀಟುಗಳ ಮಂಜೂರಾತಿ ದೊರೆತಿದ್ದು, ತುಳು ಭಾಷಿಕ ಅಲ್ಪಸಂಖ್ಯಾತರಿಗೆ 54 ಸೀಟುಗಳು ಲಭ್ಯವಾಗಲಿವೆ. ಇದು ತುಳು ಭಾಷಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶವನ್ನು ಮತ್ತಷ್ಟು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿದೆ ‘ಮಡಿಲು’ ಯೋಜನೆಯಡಿ ಕೈಗೆಟುಕುವ ಹೆರಿಗೆ ಸೇವೆ
ಆಳ್ವಾಸ್ ಹೆಲ್ತ್ ಸೆಂಟರ್‌ನ ‘ಮಡಿಲು’ ಯೋಜನೆಯಡಿ ಅತೀ ಕಡಿಮೆ ವೆಚ್ಚದಲ್ಲಿ ಹೆರಿಗೆ ಹಾಗೂ ಗರ್ಭಕೋಶಕ್ಕೆ ಸಂಬAಧಿಸಿದ ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಮಾಜದ ವಿವಿಧ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ತಲುಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಸೇವೆಕರ್ನಾಟಕ ಸರ್ಕಾರದ ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಡಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ, ಬೆಳುವಾಯಿ ಹಾಗೂ ಶಕ್ತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್ ವಹಿಸಿಕೊಂಡಿದೆ. ಈ ಕೇಂದ್ರಗಳ ಮೂಲಕ ಜನರಿಗೆ ಗುಣಮಟ್ಟದ, ಪರಿಣಾಮಕಾರಿ ಮತ್ತು ಜನಸ್ನೇಹಿ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ಮಾನಸಿಕ ಆರೋಗ್ಯಕ್ಕೂ ವಿಶೇಷ ಆದ್ಯತೆ
ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಆಳ್ವಾಸ್ ಪುನರ್ಜನ್ಮ ಕೇಂದ್ರವನ್ನು ಮೇಲ್ದರ್ಜೆಗೇರಿಸಿ 50 ಹಾಸಿಗೆಗಳ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಬಹುಶಿಸ್ತೀಯ ಮತ್ತು ಸಮಗ್ರ ಮಾನಸಿಕ ಆರೋಗ್ಯ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತಿದೆ.  ಇಲ್ಲಿಯು ಮುಂದಿನ ದಿನಗಳಲ್ಲಿ 200 ಹಾಸಿಗೆ ಸಾಮಾರ್ಥ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ.

ಭವಿಷ್ಯದ ಯೋಜನೆಗಳು
ಮುಂದಿನ ಹಂತದಲ್ಲಿ ವೃದ್ಧರಿಗಾಗಿ ವಿಶೇಷ ಆರೈಕೆ ಮತ್ತು ಚಿಕಿತ್ಸಾ ವಿಭಾಗ, ಡಯಾಲಿಸಿಸ್ ಹಾಗೂ ಕಣ್ಣಿನ ಚಿಕಿತ್ಸೆಗೆ ಪ್ರತ್ಯೇಕ ವಿಭಾಗಗಳು, ಹಾಸಿಗೆ ಹಿಡಿದಿರುವ ರೋಗಿಗಳಿಗಾಗಿ ಸುಖಾಂತ್ಯ ಆರೈಕೆ ಕೇಂದ್ರ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿವೆ.  ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಳ್ವಾಸ್ ಪುನರ್ಜನ್ಮ ಕೇಂದ್ರವನ್ನೂ ಇನ್ನಷ್ಟು ಉನ್ನತೀಕರಿಸುವ ಯೋಜನೆ ಇದೆ.

ಕರುಣೆ–ಸೇವಾ ಮನೋಭಾವದ ವೈದ್ಯರ ನಿರ್ಮಾಣ
ವೈದ್ಯಕೀಯ ಶಿಕ್ಷಣವನ್ನು ಕೇವಲ ತಾಂತ್ರಿಕ ಜ್ಞಾನಕ್ಕೆ ಸೀಮಿತಗೊಳಿಸದೆ, ರೋಗಿಗಳು ಮತ್ತು ಸಮಾಜದ ಬಗ್ಗೆ ಮಾನವೀಯತೆ, ಕರುಣೆ ಹಾಗೂ ಸೇವಾ ಮನೋಭಾವ ಹೊಂದಿರುವ ವೈದ್ಯರನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವಿವಿಧ ವಿಶೇಷ ಚಿಕಿತ್ಸಾ ವಿಭಾಗಗಳಲ್ಲಿನ ನೇರ ಸೇವಾ ಅನುಭವವು ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣಕ್ಕೆ ಮಹತ್ವದ ಪೂರಕವಾಗಲಿದೆ.

ಹಿರಿಯ ವೈದ್ಯರ ಸ್ಮರಣೆಗೆ ವಿಭಾಗಗಳಿಗೆ ಹೆಸರು
ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ್ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ.

ಸೆ. 21ರಂದು ಉದ್ಘಾಟನಾ ಸಮಾರಂಭ
ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಅವರ ಶುಭಾಶೀರ್ವಾದದೊಂದಿಗೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 21, 2026ರಂದು ಸಂಜೆ 6 ಗಂಟೆಗೆ ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ನಡೆಯಲಿದೆ.
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಸೇರಿದಂತೆ ಸಮಾಜದ ಇನ್ನಿತರ  ಹತ್ತಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 5ರಿಂದ 6ರವರೆಗೆ ಉಪಹಾರ, 6ರಿಂದ 7ರವರೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ 7ರಿಂದ 8.15ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ

Related posts

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಅಧ್ಯಕ್ಷ ದೀಪಕ್ ಜಿ. ರವರಿಗೆ ಸಮಾಜ ರತ್ನ ಪ್ರಶಸ್ತಿ

Suddi Udaya

ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ತೋರಿದ ‘ಆಸರೆ’ – ಕುಂಭಶ್ರೀ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ಅಭೂತಪೂರ್ವ ಸ್ಪಂದನೆ

Suddi Udaya

ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆ

Suddi Udaya

ನಿಡ್ಲೆ: ಪಾರ್ಪಿಕಲ್ ಸಮೀಪ ಕಾರು ಮತ್ತು ಬೈಕ್ ಅಪಘಾತ

Suddi Udaya

ಉಜಿರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

Suddi Udaya

ಪ್ರವರ್ಗ-1 ರಲ್ಲಿರುವ ಹಿಂದುಳಿದ ಜಾತಿಯ ಮೀನುಗಾರ ಮೊಗೇರರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡುವ ಹುನ್ನಾರದ ವಿರುದ್ಧ ಚುನಾವಣೆ ಬಳಿಕ ಪ್ರತಿಭಟನೆ: ಅಶೋಕ್ ಕೊಂಚಾಡಿ

Suddi Udaya
error: Content is protected !!