ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ದ.ಕ ಜಿಲ್ಲೆಯ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸ್ಥಾನ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ಜಿ.ಪಂ. ಮಾಜಿ ಸದಸ್ಯ ಹಾಗೂ ಪಂಚಗ್ಯಾರಂಟಿ ಜಿಲ್ಲಾ ಸಮಿತಿಯ ಸದಸ್ಯ ಶೇಖರ ಕುಕ್ಕೇಡಿ ರಾಜೀನಾಮೆ ನೀಡಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಅವರು ಸೆ.19ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ತಮ್ಮ ರಾಜಿನಾಮೆ ಪತ್ರದಲ್ಲಿ ತಾನು ಸುಮಾರು ಎರಡುವರೆ ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಕಳೆದ 3 ದಶಕಗಳಿಂದ ಡಿಸಿ ಮನ್ನಾ ಜಮೀನು ಅರ್ಹ ಫಲಾನುಭವಿಗಳಿಗೆ ಹಂಚಿಕೆಗಾಗಿ ನಿರಂತರವಾಗಿ ಹೋರಾಟಗಳನ್ನು ಸಂಘಟಿಸಲಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೇ ಕಾರಣದಿಂದಾಗಿ ಕಳೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಕರಾವಳಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಡಿಸಿ ಮನ್ನಾ ಜಮೀನನ್ನು ಅರ್ಹ ದಲಿತ, ಆದಿವಾಸಿ ಸಮುದಾಯಗಳ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಬಗ್ಗೆ ವಾಗ್ದಾನ ನೀಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದರೂ ನಮ್ಮ ಪಕ್ಷ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ನೋವಿನ ಸಂಗತಿ.

ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲ್ಲದೆ ಆದಿದ್ರಾವಿಡ ಸಮುದಾಯದ ಮೂಲಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿಯ ಮೀಸಲಿಡದೇ ವಂಚಿಸಲಾಗಿದೆ ನಾನು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ಆಶಯಗಳ ಮೇಲೆ ನಂಬಿಕೆ ಇಟ್ಟುಕೊಂಡು ಪಕ್ಷದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ.
ಆದರೆ, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ, ಕಲ್ಯಾಣ ಹಾಗೂ ಪ್ರಗತಿಗೆ ಅಗತ್ಯವಾದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಒದಗಿಸದಿರುವುದು ನನಗೆ ತೀವ್ರ ಬೇಸರವನ್ನುಂಟುಮಾಡಿದೆ. ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಏಳಿಗೆಯ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರವು, ಈ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಹಿತಾಸಕ್ತಿಗಳಿಗೆ ಸೂಕ್ತ ಪ್ರಾಮುಖ್ಯತೆ ದೊರೆಯದಿರುವುದರಿಂದ, ನಾನು ಈ ಪಕ್ಷದಲ್ಲಿ ಮುಂದುವರಿಯುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾದ ನಿರ್ಧಾರವಾಗುತ್ತದೆ ಎಂದು ಭಾವಿಸಿದ್ದೇನೆ.

ನಮ್ಮ ಸಮುದಾಯದ ಹಕ್ಕು, ಸ್ವಾಭಿಮಾನ, ಅಭಿವೃದ್ಧಿ ಹಾಗೂ ನ್ಯಾಯಕ್ಕಾಗಿ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಿದೆ. ಸಮುದಾಯದ ಹಿತಾಸಕ್ತಿಗಿಂತ ಪಕ್ಷದ ನಿಷ್ಠೆ ದೊಡ್ಡದಲ್ಲ ಎಂಬ ದೃಢ ನಿಲುವಿನೊಂದಿಗೆ, ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯ ಬಗ್ಗೆ ನನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ನಾನು ಹೊಂದಿರುವ ಎಲ್ಲಾ ಹುದ್ದೆಗಳಿಗೆ ಈ ಮೂಲಕ ಸ್ವಯಂಪ್ರೇರಿತವಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ದಯವಿಟ್ಟು ನನ್ನ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಬೇಕು. ನನಗೆ ಪಕ್ಷವನ್ನು ಸಂಘಟಿಸಲು ಅಸಾಧ್ಯವಾಗಿದೆ. ಉದ್ದೇಶಪೂರ್ವಕವಾಗಿ ಪ.ಜಾತಿ ಹಾಗೂ ಪ.ಪಂಗಡ ಸಮುದಾಯವನ್ನು ಸರ್ಕಾರ ಕಡೆಗಣಿಸಿರುವುದನ್ನು ವಿರೋಧಿಸಿ ನಾನು ನನ್ನ ಸ್ವ ಇಚ್ಛೆಯಿಂದ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ದ.ಕ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.











