29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರಸ್ತೆಯ ಬದಿಯಲ್ಲೇ ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ಕಂಬಗಳು

ಶಿಶಿಲ: ಅರಸಿನಮಕ್ಕಿಯಿಂದ ಶಿಶಿಲ ಸಂಪರ್ಕಿಸುವ ರಾಜ್ಯ ರಸ್ತೆಯ ಬದಿಯಲ್ಲೇ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬಗಳು ನಿಂತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಈಗಾಗಲೇ ಈ ರಸ್ತೆಯಲ್ಲಿ ಮೂರು ಅಪಘಾತಗಳು ಸಂಭವಿಸಿದ್ದರೂ ಸಂಬಂಧಪಟ್ಟ ಮೆಸ್ಕಾಂ ಇಲಾಖೆ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ಆರು ವರ್ಷಗಳ ಹಿಂದೆ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಈ ರಸ್ತೆ ಜಿಲ್ಲಾ ಪಂಚಾಯತ್ ರಸ್ತೆಯಿಂದ ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುವುದರ ಜೊತೆಗೆ, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯಾಗಿದೆ.

ಆದರೆ ರಸ್ತೆ ಮೇಲ್ದರ್ಜೆಗೇರಿದರೂ, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಮಾತ್ರ ಇದುವರೆಗೆ ಸ್ಥಳಾಂತರಿಸಲಾಗಿಲ್ಲ. ರಸ್ತೆ ಅಗಲೀಕರಣ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಕೆಲವು ಕಂಬಗಳು ಇರುವುದರಿಂದ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಈ ಸಮಸ್ಯೆಯ ಕುರಿತು ಹಲವು ವರ್ಷಗಳಿಂದ ಗ್ರಾಮಸಭೆಗಳಲ್ಲಿ ಹಾಗೂ ಜನಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವರು ವೈಯಕ್ತಿಕವಾಗಿಯೂ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ.

ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಅನುದಾನ ಇಲ್ಲವೇ? ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಅನುದಾನದ ಸಮಸ್ಯೆಯಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ.

ಈಗಾಗಲೇ ಮೂರು ಅಪಘಾತಗಳು ಸಂಭವಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಮತ್ತೊಂದು ದೊಡ್ಡ ಅನಾಹುತ ಸಂಭವಿಸುವವರೆಗೆ ಇಲಾಖೆ ಕಾಯುತ್ತಿದೆಯೇ? ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇನ್ನೊಂದು ವಿಪರ್ಯಾಸವೆಂದರೆ, ಸಂಬಂಧಪಟ್ಟ ಇಲಾಖೆಯ ಮುಖ್ಯ ಅಧಿಕಾರಿಯೇ ಮೂರು ಗ್ರಾಮ ಪಂಚಾಯತ್‌ಗಳ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಕಣ್ಣಾರೆ ಕಂಡರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಪಘಾತ ಸಂಭವಿಸಿದ ಬಳಿಕ ಪರಿಹಾರ ಹುಡುಕುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಇಲಾಖೆಯ ಕರ್ತವ್ಯ. ಜನರ ಜೀವಕ್ಕೆ ಅಪಾಯ ಉಂಟಾದ ನಂತರ ಪರಿಹಾರ ನೀಡುವುದಕ್ಕಿಂತ, ಅಪಘಾತ ಸಂಭವಿಸುವ ಮುನ್ನವೇ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ.

ಆದ್ದರಿಂದ ಮೆಸ್ಕಾಂ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಜನರ ಹಲವು ವರ್ಷಗಳ ಬೇಡಿಕೆಯನ್ನು ಇನ್ನೂ ನಿರ್ಲಕ್ಷಿಸಿದರೆ, ಮುಂದೆ ಸಂಭವಿಸುವ ಯಾವುದೇ ಅನಾಹುತಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

Related posts

ಸಂತೋಷ್ ಕುಮಾರ್ ಜೈನ್ ಅಭಿಮಾನಿ ಬಳಗದಿಂದ ಪಡಂಗಡಿಯಲ್ಲಿ ಲೆಜೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆಮಂತ್ರಣ ಪತ್ರಿಕೆ ಬಿಡುಗಡೆ: ರ್‍ಯಾಶ್ ತಂಡದಲ್ಲಿ ಆಡಲಿದ್ದಾರೆ ಶಾಸಕ ಹರೀಶ್ ಪೂಂಜ,ಆಟಗಾರರು ಪುಲ್ ಖುಷ್

Suddi Udaya

ಕೊಕ್ಕಡದಲ್ಲಿ ಎಂಡೋ ಪಿಡಿತರ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಬೇಕೆಂದು ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಬೆಳ್ತಂಗಡಿ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ:

Suddi Udaya

ಫೆ.3: ಬೆಳ್ತಂಗಡಿ ವಕೀಲರು ಭಗೀರಥ ಜಿ ರವರ ನೋಟರಿ ಕಚೇರಿಯು ಸ್ಥಳಾಂತರಗೊಂಡು ಶುಭಾರಂಭ

Suddi Udaya

‘ಕರ್ಂಗೋಲು ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಕುದ್ಕಬಚ್ಚಿರೆ’ ಕಥಾ ಸಂಕಲನ ಬಿಡುಗಡೆ

Suddi Udaya

ಲಾಯಿಲ ಅರಣ್ಯ ಪ್ರದೇಶದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ

Suddi Udaya
error: Content is protected !!