ಬೆಳ್ತಂಗಡಿ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ, ಶ್ರೀಮಂತ ಇತಿಹಾಸ, ವಿಶಿಷ್ಟ ಪರಂಪರೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರೆತಿರುವುದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.
ತುಳು ಭಾಷೆಗೆ ದೊರೆತಿರುವ ಈ ಮಾನ್ಯತೆ ಕೇವಲ ಭಾಷೆಗೆ ಸೀಮಿತವಾಗಿರದೆ, ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಪರಂಪರೆ, ಕಲೆ ಮತ್ತು ಜೀವನ ಪದ್ಧತಿಗೆ ದೊರೆತ ಗೌರವವಾಗಿದೆ. ಕರಾವಳಿಯ ಜನಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಯಕ್ಷಗಾನ, ಭೂತಕೋಲ, ಕಂಬಳ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ಹಾಗೂ ಕಲಾ ಪ್ರಕಾರಗಳಿಗೆ ಇದರಿಂದ ಮತ್ತಷ್ಟು ಗೌರವ ಮತ್ತು ಮಾನ್ಯತೆ ದೊರೆತಂತಾಗಿದೆ.
ತುಳು ಭಾಷೆ ಹಲವು ಶತಮಾನಗಳ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಜನಪದ ಸಾಹಿತ್ಯ, ಪಾಡ್ದನ, ಗಾದೆ, ಸಂಪ್ರದಾಯ ಹಾಗೂ ಸ್ಥಳೀಯ ಜಾನಪದ ಕಲೆಗಳ ಮೂಲಕ ತನ್ನದೇ ಆದ ವಿಶಿಷ್ಟ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಂತಹ ಭಾಷೆಗೆ ಅಧಿಕೃತ ಸ್ಥಾನಮಾನ ದೊರೆತಿರುವುದು ತುಳುವರ ಬಹುಕಾಲದ ಆಶಯಕ್ಕೆ ಸಂದ ಮಾನ್ಯತೆಯಾಗಿದೆ ಎಂದು ಸಂಪತ್ ಬಿ ಸುವರ್ಣ ಹೇಳಿದರು.











