ಉಜಿರೆ: ಮಂಗಳೂರು–ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಉಜಿರೆಯ ಸಂಪಿಗೆ ನಗರ ಪ್ರದೇಶದಲ್ಲಿ ರಸ್ತೆ ಬದಿ ಹಾಗೂ ಅಲ್ಲಲ್ಲಿ ಕಂಡುಬರುತ್ತಿರುವ ತ್ಯಾಜ್ಯ ರಾಶಿಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
ಹೆದ್ದಾರಿ ಬದಿಯಿಂದ ಅಣತಿ ದೂರದಲ್ಲಿರುವ ಈ ಪ್ರದೇಶದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ನಿರಂತರ ಓಡಾಟವಿದೆ. ಆದರೆ ಜನವಸತಿ ಪ್ರದೇಶದ ಸಮೀಪವೇ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯದ ಜತೆಗೆ ಆರೋಗ್ಯದ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಪೌಂಡ್ ಬದಿವರೆಗೂ ಕಸ
ಕೆಲವು ಕಡೆಗಳಲ್ಲಿ ಮನೆಗಳ ಕಾಂಪೌಂಡ್‌ಗಳ ಬದಿವರೆಗೂ ಕಸವನ್ನು ತಂದು ಸುರಿಯಲಾಗುತ್ತಿದೆ. ಹಳಸಿದ ಆಹಾರ ತ್ಯಾಜ್ಯ, ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯವನ್ನು ಒಂದೇ ಕಡೆ ಸುರಿಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ದುರ್ವಾಸನೆ ಬೀರುವುದರ ಜತೆಗೆ ಸೊಳ್ಳೆ, ನೊಣ ಹಾಗೂ ಇತರ ಕೀಟಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆಯಿದೆ. ಮಳೆ ಬಂದ ಸಂದರ್ಭದಲ್ಲಿ ಕಸದ ಕೊಳೆ ನೀರು ಸುತ್ತಮುತ್ತ ಹರಿದು ಪರಿಸರಕ್ಕೆ ಹಾನಿಯಾಗುವ ಆತಂಕವೂ ಇದೆ.
ಜನವಸತಿ ಪ್ರದೇಶದಲ್ಲೇ ಇಂತಹ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ತ್ಯಾಜ್ಯದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸ್ಥಳೀಯರೇ? ಹೊರಗಿನವರೇ?
ಈ ಪ್ರದೇಶದಲ್ಲಿ ಕಸವನ್ನು ತಂದು ಸುರಿಯುತ್ತಿರುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯರೇ ಕಸವನ್ನು ವಿಲೇವಾರಿ ಮಾಡುತ್ತಿದ್ದಾರೆಯೇ ಅಥವಾ ಹೊರ ಪ್ರದೇಶಗಳಿಂದ ವಾಹನಗಳಲ್ಲಿ ತಂದು ಇಲ್ಲಿ ಸುರಿಯಲಾಗುತ್ತಿದೆಯೇ ಎಂಬ ಅನುಮಾನವೂ ಸ್ಥಳೀಯರಲ್ಲಿ ಮೂಡಿದೆ.
ರಾತ್ರಿ ಅಥವಾ ಸಾರ್ವಜನಿಕರ ಗಮನಕ್ಕೆ ಬಾರದ ಸಮಯದಲ್ಲಿ ವಾಹನಗಳಲ್ಲಿ ತ್ಯಾಜ್ಯ ತಂದು ಸುರಿಯುವ ಸಾಧ್ಯತೆಯಿರುವುದರಿಂದ ಈ ಬಗ್ಗೆ ನಿಗಾ ವಹಿಸುವ ಅಗತ್ಯವಿದೆ. ಕಸ ಸುರಿಯುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಸ್ಥಳೀಯರು ಹೇಳಿದ್ದಾರೆ.
ಸಿಸಿಟಿವಿ ಅಳವಡಿಕೆಗೆ ಆಗ್ರಹ
ರಸ್ತೆ ಬದಿ ತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕಲು ಸಂಪಿಗೆ ನಗರ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಸ ಸುರಿಯುವವರನ್ನು ಗುರುತಿಸಿ ನಿಯಮಾನುಸಾರ ದಂಡ ವಿಧಿಸುವುದರ ಜತೆಗೆ, ಸಂಗ್ರಹವಾಗಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು ಎಂಬುದು ಅವರ ಒತ್ತಾಯವಾಗಿದೆ.
ಹೆದ್ದಾರಿ ಬದಿಯ ಜನವಸತಿ ಪ್ರದೇಶವಾಗಿರುವ ಸಂಪಿಗೆ ನಗರದಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ತ್ಯಾಜ್ಯ ತೆರವು ಹಾಗೂ ನಿರಂತರ ನಿಗಾ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕಿದೆ.











