ಉಜಿರೆ: ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೆ, ಸಾಹಿತ್ಯ, ಕಲೆ, ವಿಜ್ಞಾನ ಹೀಗೆ ಎಲ್ಲಾ ರಂಗಗಳಲ್ಲೂ ತಮ್ಮ ಮುದ್ರೆ ಒತ್ತುತ್ತಿದ್ದಾರೆ. ಅದಕ್ಕೆ ಸಾಕ್ಷಿ ಇಂದು ನಮ್ಮ ಕಣ್ಣೆದುರಿಗಿರುವ ಈ ಭಿತ್ತಿ ಪತ್ರಿಕೆ. ಇದರಲ್ಲಿ ಪ್ರಕಟವಾಗಿರುವ ಕವಿತೆಗಳು, ಲೇಖನಗಳು, ಸುಂದರವಾದ ಚಿತ್ರಕಲೆಗಳು ಮತ್ತು ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ನೋಡಿದಾಗ ನಮ್ಮ ವಿದ್ಯಾರ್ಥಿನಿಯರಲ್ಲಿ ಎಷ್ಟು ಅದ್ಭುತವಾದ ಪ್ರತಿಭೆ ಅಡಗಿದೆ ಎಂಬುದು ಸಾಬೀತಾಗುತ್ತದೆ ಎಂದು ಎಸ್.ಡಿ.ಎಂ ಜರ್ನಲಿಸಂ ವಿಭಾಗದ ನ್ಯೂಸ್ ಆಪ್ ಎಡಿಟರ್ ಆಗಿರುವ ಮೋಕ್ಷಾ ರೈ ಇವರು ಎಸ್.ಡಿ.ಎಂ ಮಹಿಳಾ ಐ.ಟಿ.ಐಯ ಭಿತ್ತಿಪತ್ರಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಹಿಳಾ ಸಬಲೀಕರಣದ ಉದ್ದೇಶ ಗ್ರಾಮೀಣ ಭಾಗದ ಬಡ ಕುಟುಂಬದ ಹೆಣ್ಣುಮಕ್ಕಳ ಪ್ರತಿಭೆ ಅನಾವರಣ ಆಗಬೇಕು ಅದಕ್ಕಾಗಿ ತರಗತಿ (ಕ್ಲಾಸ್ ರೂಮಿನ) ಪಾಠಗಳ ಜೊತೆಗೆ ಇಂತಹ ಸೃಜನಶೀಲ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಿದಾಗ ಮಾತ್ರ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ (Personality Development) ಅತ್ಯಂತ ಸಹಕಾರಿಯಾಗುತ್ತವೆ. ಬರವಣಿಗೆ ಎಂಬುದು ನಿಮ್ಮ ಯೋಚನೆಗಳಿಗೆ ರೆಕ್ಕೆಗಳನ್ನು ನೀಡುತ್ತದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಜಗತ್ತಿಗೆ ತಲುಪಿಸಲು ಲೇಖನಿಗಿಂತ ದೊಡ್ಡ ಆಯುಧ ಮತ್ತೊಂದಿಲ್ಲ. ಈ ಭಿತ್ತಿ ಪತ್ರಿಕೆಯನ್ನು ಇಷ್ಟು ಆಕರ್ಷಕವಾಗಿ ಮೂಡಿಸಲು ಹಗಲಿರುಳು ಶ್ರಮಿಸಿದ ವಿದ್ಯಾರ್ಥಿನಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ವಿ ಪ್ರಕಾಶ್ ಕಾಮತ್ ಮಾತನಾಡಿ ಈ ಪತ್ರಿಕೆಗೆ ‘ವನಿತೆ’ ಎಂದು ಹೆಸರಿಟ್ಟಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ‘ವನಿತೆ’ ಎಂದರೆ ಕೇವಲ ಹೆಣ್ಣು ಎಂದಷ್ಟೇ ಅಲ್ಲ, ಅವಳು ಜ್ಞಾನದ ಸಂಕೇತ, ಸೃಜನಶೀಲತೆಯ ಗಣಿ. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗಿರದೆ ಮುಂದಿನ ದಿನಗಳಲ್ಲೂ ನಿಮ್ಮ ಲೇಖನಿ ನಿರಂತರವಾಗಿ ಸಾಗಲಿ, ನಿಮ್ಮ ಪ್ರತಿಭೆ ಮತ್ತಷ್ಟು ಎತ್ತರಕ್ಕೆ ಬೆಳಗಲಿ ಎಂದು ಆಶಿಸುತ್ತೇನೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಹಾಗೂ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಸಹಕರಿಸಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಸಂಸ್ಥೆಯ ವಿದ್ಯಾರ್ಥಿನಿಯಾದ ನಿಶಾ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಲಿಕಿತಾ ಸ್ವಾಗತಿಸಿದರು. ತೃಪ್ತಿ ಧನ್ಯವಾದ ನೀಡಿದರು.
ನಂತರ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು











