ಉಜಿರೆ: ಇಂದಿನ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಗತಿ ಕಂಡುಬಂದಿದ್ದರೂ, ಮಾನವೀಯ ಮೌಲ್ಯಗಳ ಕುಸಿತ ಮತ್ತು ಯುದ್ಧ ಮನೋಭಾವದ ಹೆಚ್ಚಳವು ವಿಶ್ವದ ಶಾಂತಿಗೆ ಸವಾಲಾಗಿ ಪರಿಣಮಿಸಿದೆ. ಮನುಷ್ಯರು ಸ್ವಾರ್ಥ, ಅಹಂಕಾರ ಮತ್ತು ಅಸಹಿಷ್ಣುತೆಗೆ ಒಳಗಾಗುತ್ತಿರುವ ಕಾರಣ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಪುತ್ತೂರಿನ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ನಂದಕಿಶೋರ್ ಎಸ್ ಅಭಿಪ್ರಾಯಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಶಾಂತಿ ದಿನದ ಅಂಗವಾಗಿ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಗಣೇಶ್ ನಾಯಕ್ ಮಾತನಾಡಿ, ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಶಾಂತಿಯ ಅಗತ್ಯತೆಯನ್ನು ವಿವರಿಸಿದರು. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಯುದ್ಧಗಳು ಮಾನವ ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ. ಶಾಂತಿ ಎನ್ನುವುದು ಕೇವಲ ಯುದ್ಧದ ಅನುಪಸ್ಥಿತಿ ಮಾತ್ರವಲ್ಲ, ಅದು ನ್ಯಾಯ, ಸಮಾನತೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ನಿರ್ಮಾಣವಾಗುವ ಮೌಲ್ಯ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಟರಾಜ್ ಎಚ್.ಕೆ. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ಅಂತಾರಾಷ್ಟ್ರೀಯ ಶಾಂತಿ ದಿನದ ಇತಿಹಾಸ, ಉದ್ದೇಶ ಮತ್ತು ಅದರ ಸಮಕಾಲೀನ ಪ್ರಸ್ತುತತೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಪಿ.ಪಿ., ಸಪ್ನ ಕೆ.ಎಸ್. ಹಾಗು ವಿದ್ಯಾರ್ಥಿ ಸಂಯೋಜಕಿ ತನು ಕೆ ಸಿ ಹೆಗ್ಡೆ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಿಂಧ್ಯಾ ನಿರೂಪಿಸಿ, ವಿದ್ಯಾರ್ಥಿನಿ ಲಾವಣ್ಯ ವಂದಿಸಿದರು.











