September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೆ.30ರಂದು ಪಿಡಿಓ ಪಿ.ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ ಸೇವಾ ನಿವೃತ್ತಿ

ಉಜಿರೆ: ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಶಿಸ್ತು, ಸರಳತೆ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ ಪಿ.ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ ಅವರು ಸೆ.30ರಂದು ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.

ಉಜಿರೆ, ಚಾರ್ಮಾಡಿ ಹಾಗೂ ಲ್ಯಾಲ ಗ್ರಾಮ ಪಂಚಾಯತ್‌ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಅವರು, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹಲವು ಗಮನಾರ್ಹ ಕಾರ್ಯಗಳಿಗೆ ಕಾರಣರಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ ವಿವಿಧ ಪ್ರಶಸ್ತಿ–ಪುರಸ್ಕಾರಗಳು ಲಭಿಸಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ, ರಾಜ್ಯ ನೈರ್ಮಲ್ಯ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಕೋಟ ಶಿವರಾಮ ಕಾರಂತ ಪ್ರಶಸ್ತಿ, ಪರಿಸರ ಪ್ರಶಸ್ತಿ–2015, ‘ಗ್ವಾಡ್ ಪ್ರೈ ಫಿಲಿಪ್ಸ್ ಬ್ರೆವರಿ ಅವಾರ್ಡ್’, ಜಿಲ್ಲಾ ಮಟ್ಟದ ನಾಗರಿಕ ಸೇವಾ ಪ್ರಶಸ್ತಿ, ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ ‘ಸ್ವಚ್ಛತಾ ಸೇವಾ ಹೀ’ ಪ್ರಶಸ್ತಿಗಳು ಅವರ ಸೇವೆಯನ್ನು ಗುರುತಿಸಿವೆ.

ಲ್ಯಾಲ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದ ಅವಧಿಯಲ್ಲಿ ಪಂಚಾಯತ್‌ಗೆ ಐಎಸ್‌ಒ ಮಾನ್ಯತೆ ದೊರೆತಿದ್ದು, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ‘ಲ್ಯಾಲ ಗೋಲ್ಡ್’ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿದ ಕಾರ್ಯವೂ ಗಮನಾರ್ಹವಾಗಿದೆ.

ಬಹುಮುಖ ಸೇವಾ ಚಟುವಟಿಕೆ:
ಸರ್ಕಾರಿ ಸೇವೆಯ ಜೊತೆಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೃಷಿ ಕ್ಷೇತ್ರದಲ್ಲಿಯೂ ಪ್ರಕಾಶ್ ಶೆಟ್ಟಿ ನೊಚ್ಚ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ,ಲಯನ್ಸ್ ಕ್ಲಬ್ ಅಧ್ಯಕ್ಷ, ವಲಯಾಧ್ಯಕ್ಷ, ಪ್ರಾಂತ್ಯಾಧ್ಯಕ್ಷ ಹಾಗೂ ಜಿಲ್ಲಾ ಸಂಯೋಜಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಸುಮಾರು 250ಕ್ಕೂ ಅಧಿಕ ವೇದಿಕೆಗಳಲ್ಲಿ ಧಾರ್ಮಿಕ ಉಪನ್ಯಾಸ ನೀಡಿರುವ ಅನುಭವ ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿಯೂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಅವರು ನೂರಕ್ಕೂ ಅಧಿಕ ತುಳು ನಾಟಕ, ಪೌರಾಣಿಕ ನಾಟಕ ಹಾಗೂ ಯಕ್ಷಗಾನಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷಿಯ ಬಗ್ಗೆ ಅಪಾರ ಒಲವು ಹೊಂದಿರುವ ಅವರು ಕಳೆದ 20 ವರ್ಷಗಳಿಂದ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಶಿಕ್ಷಣ–ಸಾಮಾಜಿಕ ಕ್ಷೇತ್ರದಲ್ಲೂ ಮುಂದಾಳತ್ವ:ಬೆಳ್ತಂಗಡಿ ತಾಲೂಕಿನ ಅಳದಂಗಡಿ ನೊಚ್ಚ ಮನೆಯ ದಿ. ನಾರಾಯಣ ಶೆಟ್ಟಿ ಹಾಗೂ ಲಕ್ಷ್ಮೀ ಎನ್. ಶೆಟ್ಟಿ ದಂಪತಿಯ ಪುತ್ರರಾದ ಪ್ರಕಾಶ್ ಶೆಟ್ಟಿ ಅವರು ಮಿಯಪದವು ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕನ್ಯಾನ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ, ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಜಿ.ಪಿ.ಡಿ.ಆರ್. ಶಿಕ್ಷಣವನ್ನು ಪೂರೈಸಿದ್ದಾರೆ.

ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅವರು ಪ್ರವೀಣಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದು, ಮಕ್ಕಳಾದ ಪ್ರಕೃತಿ ಹಾಗೂ ಪ್ರತೀಕ್ ಅವರೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದಾರೆ.

ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಶೆಟ್ಟಿ ನೊಚ್ಚ ಅವರು ವಾಗ್ಮಿ, ಸಾಮಾಜಿಕ–ಧಾರ್ಮಿಕ–ಶೈಕ್ಷಣಿಕ ಕ್ಷೇತ್ರದ ಮುಂದಾಳು ಹಾಗೂ ಕೃಷಿಕರಾಗಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

Related posts

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ದ.ಕ. ಪ್ರಥಮ , ಉಡುಪಿ ದ್ವಿತೀಯ ಸ್ಥಾನ

Suddi Udaya

ಶಿಶಿಲ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

Suddi Udaya

ಇತಿಹಾಸ ಪ್ರಸಿದ್ಧ ಶಿಶಿಲ ಜಾತ್ರೆಗೆ ಚಾಲನೆ-ಗೊನೆ ಮುಹೂರ್ತ

Suddi Udaya

ನೂತನ ಉಪರಾಷ್ಟ್ರಪತಿಯಾಗಿ ಎ ನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್

Suddi Udaya

ಏ.23-24: ಇಚ್ಚಿಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ-ಗುರುಮಂದಿರ ಲೋಕಾರ್ಪಣೆ

Suddi Udaya

ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಕಡಿರುದ್ಯಾವರ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya
error: Content is protected !!