ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರಿ ಜನರಲ್ ರೆ. ಡಾ. ಮಾಣಿ ವೆಳುತ್ತೇಡತ್ತುಪರಂಬಿಲ್ ಅವರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
ವೈದಿಕ ಸೇವೆ, ಶಿಕ್ಷಣ ಹಾಗೂ ಧರ್ಮಸಭೆಯ ವಿವಿಧ ಸೇವೆಗಳಲ್ಲಿ ಸಮರ್ಪಿತ ಜೀವನವನ್ನು ನಡೆಸಿದವರಾಗಿದ್ದರು ಫಾ. ಮಾಣಿ. ದಿವಂಗತರಾದ ಮಾಣಿ ಮತ್ತು ತ್ರೇಸ್ಯಮ್ಮ ಅವರ ಪುತ್ರರಾಗಿದ್ದ ಅವರು ಎಂಟು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರ ಸಹೋದರರಾದ ಜೋಸ್ ಮತ್ತು ಸ್ಕರಿಯಾ, ಸಹೋದರಿಯರಾದ ಮರಿಯಾ, ಎಲಿಜಬೆತ್, ಜೆಸ್ಸಿ, ಫಿಲೋಮಿನಾ ಮತ್ತು ತ್ರೇಸ್ಯ ಅವರು ಕುಟುಂಬದ ಸದಸ್ಯರಾಗಿದ್ದಾರೆ.
ನೀಲ್ಯಾಡ್ಕ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉಡಾನೆಯ ಸೇಂಟ್ ಆಂಥೋನೀಸ್ ಹೈಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತಲಶ್ಶೇರಿಯ ಸೇಂಟ್ ಜೋಸೆಫ್ ಮೈನರ್ ಸೆಮಿನರಿ ಹಾಗೂ ಕೋಟಯಂ ವಡವಾತೂರಿನ ಸೇಂಟ್ ಥಾಮಸ್ ಅಪೋಸ್ತೋಲಿಕ್ ಸೆಮಿನರಿಯಲ್ಲಿ ವೈದಿಕ ತರಬೇತಿ ಪಡೆದರು. ಮೈಸೂರಿನ KSOU ಹಾಗೂ ರೋಮ್‌ನ Pontifical University of the Holy Crossನಲ್ಲಿ ಉನ್ನತ ಶಿಕ್ಷಣ ಪಡೆದ ಅವರು 2006ರಲ್ಲಿ ರೋಮ್‌ನಿಂದ ಡಾಕ್ಟರೇಟ್ ಪದವಿ ಪಡೆದರು.
ಬೆದೂರು, ಚೆಂಪನೋಡ, ಮುದೂರು, ಬಂಗಾಡಿ, ಧರ್ಮಸ್ಥಳ, ಬೆಳ್ತಂಗಡಿ, ಕುಟ್ರಪಾಡಿ ,ಸಿದ್ದಾಪುರ (ಕೊಡಗು), ಜಡ್ಕಲ್ ಹಾಗೂ ಕಂಕನಾಡಿ ಸೇರಿದಂತೆ ವಿವಿಧ ಧರ್ಮಕೇಂದ್ರಗಳಲ್ಲಿ ಅವರು ವೈದಿಕ ಸೇವೆ ಸಲ್ಲಿಸಿದರು.ಅವರ ಕುಟುಂಬದ ಸದಸ್ಯರು ಹಾಗೂ ಬಂಧುಗಳಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅವರ ಆತ್ಮಶಾಂತಿಗಾಗಿ ಧರ್ಮಪ್ರಾಂತ್ಯದ ಭಕ್ತರು ಪ್ರಾರ್ಥನೆಯಲ್ಲಿ ಒಂದಾಗಿದ್ದಾರೆ.













