24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಸ್ತೂರಿ ರಂಗನ್ ವರದಿ ಸಂಪೂರ್ಣ ಕೈಬಿಡುವಂತೆ ಆಗ್ರಹಿಸಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನಾ ಸಭೆ

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಆಗ್ರಹಿಸಿ ಮಲೆನಾಡು ಜನಹಿತ
ರಕ್ಷಣಾ ವೇದಿಕೆ ವತಿಯಿಂದ ಅ.6 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಯಾವುದೇ ರೀತಿಯ ವಲಯ ಘೋಷಣೆಯಲ್ಲಿ ನಮ್ಮ ಗ್ರಾಮಗಳ ಹೆಸರನ್ನು ಕೈಬಿಡಬೇಕು. ಪಶ್ಚಿಮ ಘಟ್ಟ ಹಾಗೂ ಜನವಸತಿ ಪ್ರದೇಶಗಳ ನಡುವೆ ಗಡಿಗುರುತು ಮಾಡಿ ಶೂನ್ಯ ಬಫರ್ ಜೋನ್ ಘೋಷಿಸಬೇಕು. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡುವುದರ ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕೃಷಿ ನಾಶ ಮಾಡುವ ವನ್ಯಪ್ರಾಣಿಗಳನ್ನು ಪಶ್ಚಿಮ ಘಟ್ಟದ ಕಾಡಿಗೆ ಸ್ಥಳಾಂತರಿಸಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಕಸ್ತೂರಿ ರಂಗನ್ ವರದಿ ಕುರಿತು ನಿಮ್ಮೆಲ್ಲರ ಪರವಾಗಿ ವಿಧಾನಸಭಾ ಅಧಿವೇಶನದಲ್ಲಿ ನಾನು ಈಗಾಗಲೇ ಧ್ವನಿ ಎತ್ತಿದ್ದೀನಿ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗಾಡ್ಲಿಲ್ ವರದಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಇದಕ್ಕೆ ಏಳು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆ ವರದಿಯನ್ನು ಹಿಂಪಡೆಯಲಾಯಿತು. ಬಳಿಕ ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ಆದೇಶಿಸಲಾಯಿತು. ಮನಮೋಹನ್ ಸಿಂಗ್ ಅವರ ಸರ್ಕಾರ ಈ ಆದೇಶ ಮಾಡಿದೆ ಎಂಬುದೂ ವರದಿಯಲ್ಲಿ ಉಲ್ಲೇಖವಾಗಿದೆ. ಇದಕ್ಕೂ ಏಳು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಹೋಗುವಂತಾಯಿತು. ಇಲ್ಲಿ ಗೋವಾ ಫೌಂಡೇಶನ್‌ನವರು ಗಾಡ್ಲಿಲ್ ವರದಿ ಜಾರಿಗೆ ತರಬೇಕೆಂದು ವಾದಿಸುತ್ತಿದ್ದು, ಇಂದಿಗೂ ವಾದ ಮುಂದುವರಿಸಿದ್ದಾರೆ ಎಂದರು.


ಕೇರಳ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಗಡಿ ಗುರುತಿಸಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಅದರಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಇದುವರೆಗೆ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ಸ್ವಲ್ಪ ಕಾಲಾವಕಾಶ ನೀಡಿ, ಕೇಂದ್ರ ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಇದರ ಬದಲು ಕೇರಳದ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಅಧ್ಯಯನ ನಡೆಸಿ, ಗಡಿಗುರುತು ಮಾಡಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಸಲ್ಲಿಸಬೇಕು. ಈ ಮೂಲಕ ಕಸ್ತೂರಿ ರಂಗನ್ ವರದಿಯಿಂದ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಇದು ಕಾನೂನಾತ್ಮಕ ಹೋರಾಟವಾಗಿದೆ. ಮಾಧವ ಗಾಡ್ಮಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳು ಜಾರಿಯಾದರೆ ನಮ್ಮ ಆಧ್ಯಾತ್ಮಿಕತೆಗೂ ಹೊಡೆತ ಬೀಳಲಿದೆ. ಕೋಟೆಗಳು, ದೇವಸ್ಥಾನಗಳು ಹಾಗೂ ಅವುಗಳ ಪೂಜಾ ಪದ್ಧತಿಗಳಿಗೆ ಅಡ್ಡಿಯಾಗಲಿದೆ. ಆರಾಧನಾ ಕ್ಷೇತ್ರಗಳು ಹಾಗೂ ರೈತರ ಜಮೀನುಗಳು ಉಳಿಯಬೇಕಾದರೆ ಹೋರಾಟ ಮಾಡಲೇಬೇಕು. ಇಲ್ಲವಾದರೆ ನಾಗಾರಾಧನೆಯ ನೆಲವಾದ ದಕ್ಷಿಣ ಕನ್ನಡದ ಮುಂದಿನ ಪೀಳಿಗೆಗೆ ಇದರ ಶಾಪ ತಟ್ಟಲಿದೆ ಎಂದರು.


ಹೋರಾಟದಲ್ಲಿ ಐದು ಮಂದಿಯೇ ಇರಲಿ, ಆದರೆ ಹೋರಾಟದ ಧ್ವನಿ ಪ್ರಬಲವಾಗಿರಬೇಕು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಾ ಜನರು ಹಾಗೂ ರೈತರ ಪರವಾಗಿ ನಿಲ್ಲಲಿದೆ. ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿಯೇ ಹೋರಾಟ ನಡೆಸಿ ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯುವಂತೆ ಮಾಡಲಾಗುವುದು ಎಂದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದಿಂದ ರಣಹದ್ದುಗಳ ಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ರಣಹದ್ದು ಯೋಜನಾ ಕೇಂದ್ರ ಸ್ಥಾಪಿಸುವ ಯೋಜನೆ ರೂಪಿಸುವಂತೆ ಒತ್ತಾಯಿಸಲಾಗುತ್ತಿದೆ. ಹೀಗೆ ಒಂದೊಂದೇ ಕಾನೂನನ್ನು ಜಿಲ್ಲೆಯ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿಯಂತಹ ಇನ್ನೂ ಹಲವು ವರದಿಗಳಿದ್ದು, ಅವುಗಳು ಜಿಲ್ಲೆಯ ಸರ್ವನಾಶಕ್ಕೆ ಕಾರಣವಾಗಬಹುದು. ಹೀಗಾಗಿ ಜನರೆಲ್ಲರೂ ಒಗ್ಗೂಡಿ ಹೋರಾಡಬೇಕಾಗಿದೆ ಎಂದರು.


ಪ್ರಜಾಪ್ರಭುತ್ವದ ಅಡಿಯಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಎಲ್ಲಿಯೂ ಚುನಾವಣಾ ಬಹಿಷ್ಕಾರ ನಡೆಸುವುದಿಲ್ಲ. ಜನರಿಗೆ ತಿಳಿಯದ ರೀತಿಯಲ್ಲಿ ಕಾನೂನು ಜಾರಿಗೆ ತರುವ ಅಧಿಕಾರಿಗಳ ವಿರುದ್ಧ ನಾವೆಲ್ಲರೂ ಜಾಗೃತರಾಗಿರಬೇಕು. ನಮ್ಮ ಮುಂದಿನ ಹೋರಾಟ ಇನ್ನಷ್ಟು ತೀವ್ರವಾಗಿರಲಿದೆ. ಇದನ್ನು ತಿಳಿಸಲು ಹಾಗೂ ಕಾನೂನಾತ್ಮಕ ಹೋರಾಟಕ್ಕೆ ಜನರನ್ನು ಸಂಘಟಿಸಲು ತಾಲೂಕುವಾರು ಗಣ್ಯರ ಸಮಿತಿ, ಮಹಿಳಾ ಸಮಿತಿ, ಯುವ ಸಮಿತಿ, ಸಂಘಟನಾ ಸಮಿತಿ ಹಾಗೂ ವಲಯ ಸಮಿತಿಗಳನ್ನು ರಚಿಸಲಾಗುವುದು ಎಂದರು. ಸಾಮಾಜಿಕ ಹೋರಾಟಗಾರರೂ ಆಗಿರುವ ಜಿ ಸಮಿತಿ ಸದಸ್ಯ ಸೋಯೀ ವರ್ಗೀಸ್ ಪುದುವೆಟ್ಟು ಮಾತನಾಡಿ, ಕಿಶೋರ್ ಶಿರಾಡಿಯವರು ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದೆ, ಯಾವುದೇ ಆಮಿಷಗಳಿಗೆ ಒಳಗಾಗದೆ ನಿರಂತರವಾಗಿ ಜನರೊಂದಿಗೆ ಇದ್ದುಕೊಂಡು ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ಜನರೆಲ್ಲರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು.

ಬೆಳ್ತಂಗಡಿ ಶಾಸಕರು ರಾಜಕೀಯವನ್ನು ಬದಿಗಿಟ್ಟು ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಇಂತಹ ಶಾಸಕರನ್ನು ಕೆಲವೊಮ್ಮೆ ಜನರೇ ಒಂಟಿಯಾಗಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯದ ವನ್ಯಪ್ರಾಣಿಗಳು ಕೃಷಿಯನ್ನು ನಾಶ ಮಾಡುತ್ತಿವೆ. ಇದನ್ನು ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ. ಇತ್ತೀಚೆಗೆ ಪ್ರಾಣಿ ಬೇಟೆ ಆರೋಪದಡಿ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆದರ ರೈತರ ಕೃಷಿಯನ್ನು ನಾಶಪಡಿಸುತ್ತಿರುವ ಹಾಗೂ ಮನುಷ್ಯರ ಪ್ರಾಣಕ್ಕೆ ಅಪಾಯ ಉಂಟುಮಾಡುತ್ತಿರುವ ವನ್ಯಪ್ರಾಣಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಪ್ರಾಣಿಗಳಿಗಿರುವ ಬೆಲೆ ಮನುಷ್ಯರಿಗಿಲ್ಲವೇ? ಎಂದು ಪ್ರಶ್ನಿಸಿದರು. ಹೈಫೈ ಬಂಗಲೆಗಳಲ್ಲಿ ಕುಳಿತುಕೊಂಡು ಕಾನೂನು ರೂಪಿಸುವವರಿಗೆ ಜನರ ಹಾಗೂ ರೈತರ ಕಷ್ಟ ಅರ್ಥವಾಗುವುದಿಲ್ಲ. ಹೀಗಾಗಿ ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್ ಮಾತನಾಡಿ, ಕೇರಳ ಸರ್ಕಾರ ತನ್ನ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡು ವರದಿ ಜಾರಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರ ಯಾಕೆ ಇಂತಹ ಕ್ರಮ ಕೈಗೊಳ್ಳಬಾರದು? ನಮ್ಮ ರೈತರಿಗೆ ತೊಂದರೆ ನೀಡುವಂತಹ ಅಗತ್ಯವೇನಿದೆ? ಜನವಸತಿ ಪ್ರದೇಶಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಅರಣ್ಯ ಇಲಾಖೆ ಯಾಕೆ ಮುಂದಾಗಿದೆ? ತಾತ-ಮುತ್ತಾತನ ಕಾಲದಿಂದಲೂ ವರದಿ ಜಾರಿಗೆ ಉzಶಿಸಿರುವ ಪ್ರದೇಶಗಳಲ್ಲಿ ಜನರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ವರದಿ ಜಾರಿಯಾದರೆ ಜನರ ಬದುಕಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.


ಕೇಂದ್ರದ ಮೇಲೆ ಹೊರಿಸಬೇಡಿ ಕಸ್ತೂರಿ ರಂಗನ್ ವರದಿಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದ್ಯಾವುದನ್ನೂ ಕೇಂದ್ರ ಸರ್ಕಾರದ ಮೇಲೆ ಹೊರಿಸಬೇಡಿ. ವರದಿ ಜಾರಿ ಮಾಡುವಂತೆ ನ್ಯಾಯಾಲಯವು ನಿರ್ದೇಶಿಸಿದಂತಹದ್ದಾಗಿದೆ. ಅದರ ಆಧಾರದ ಮೇಲೆ ಗಜೆಟೆಡ್ ನೋಟಿಫಿಕೇಶನ್ ಹೊರಡಿಸಲಾಗಿದೆ. – ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ

Related posts

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇದೆ ಸುಬ್ಬ ಪೂಜಾರಿ, ಮಿತ್ತಮಾರು ಬಿರ್ಮಣ್ಣ ಪೂಜಾರಿ, ಕುಂಜೀರ ಯಾನೆ ಸಿದ್ದಪ್ಪ ಪೂಜಾರಿ,ಸಮಾಜದ ಹಿರಿಯರು,ಮಾಜಿ ಶಾಸಕ ಕೆ.ವಸಂತ ಬಂಗೇರರವರು ಸೇರಿ ಸ್ಥಾಪಿಸಿದ ಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ ತಥವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿ ಸೇವಾ ಕಾರ್ಯ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಬೆಳ್ತಂಗಡಿ : ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಾಧನಾ ಪ್ರಶಸ್ತಿ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ ವೈಭವದ ಪಾದಯಾತ್ರೆ: ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು : ಭಜನಾ ತಂಡಗಳಿಂದ ಕುಣಿತ ಭಜನೆ

Suddi Udaya
error: Content is protected !!