ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಕುಡ್ಲ [ಜಿಲ್ಲೆ ] ಎಂದು ಬದಲಿಸುವಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡ್ ಒಕ್ಕೂಟದ ಸಂಸ್ಥಾಪಕರಾದ ಶೈಲೇಶ್ ಆರ್.ಜೆ. ಅವರು ಮನವಿ ನೀಡಿರುತ್ತಾರೆ.
ಮನವಿಯಲ್ಲಿ ನೇತ್ರಾವತಿ ನದಿ ಮತ್ತು ಪಲ್ಗುಣಿ ನದಿ ಮತ್ತು ಸಮುದ್ರವು ಸೇರುವ ಜಾಗದಲ್ಲಿ ತುಳುವ ನಾಗರೀಕತೆ ಬೆಳೆದಂತೆ ಬೆಳೆದ ಊರು,ಪಟ್ಟಣ,ನಗರ, ಮಹಾನಗರವೇ ಕುಡ್ಲ. ಕುಡ್ಲ ಎನ್ನುವ ಹೆಸರು ಇಡೀ ಜಿಲ್ಲೆಯ ಜೀವಜಲ ಹರಿಯುವ ನರನಾಡಿಯ ಕೇಂದ್ರ ಬಿಂದು. ಇಡೀ ಜಿಲ್ಲೆಯ ಜನರು ಮತ್ತು ಜಿಲ್ಲೆಯ ಸುತ್ತಲಿನ ತುಳು ಪ್ರಾಂತ್ಯದ ಜನರು ಈ ಮಹಾನಗರವನ್ನು ಕುಡ್ಲ ಎಂದೇ ಕರೆಯುತ್ತಾರೆ. ದೇಶ-ವಿದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಜಿಲ್ಲೆಯ ಜನರು ತಮ್ಮನ್ನು ” ಕುಡ್ಲದಾಯೆ “(ಕುಡ್ಲದವನು) ಎಂದೇ ಪರಿಚಯಿಸಿಕೊಳ್ಳುತ್ತಾರೆ. ಹಾಗಾಗಿ ಮಂಗಳೂರು ನಗರದ ಹೆಸರನ್ನು ಕುಡ್ಲ ಎಂದು ಬದಲಾಯಿಸಬೇಕು ಹಾಗೂ ದ.ಕ. ಜಿಲ್ಲೆಯ ಹೆಸರನ್ನು ಜಿಲ್ಲಾ ಕೇಂದ್ರವಾದ ಕುಡ್ಲದ ಹೆಸರಲ್ಲಿ ಕುಡ್ಲ ಎಂದು ಬದಲಾಯಿಸಬೇಕು.
ದ.ಕ. ಎನ್ನುವ ಹೆಸರು ಪೋರ್ಚುಗೀಸರ ಕಿನಾರದಿಂದ ಬ್ರಿಟಿಷರ ಕೆನಾರವಾಗಿ ಮುಂದೆ ಸೌತ್ ಕೆನಾರವಾಗಿ ಮುಂದೆ ದಕ್ಷಿಣ ಕನ್ನಡವಾಗಿ ಅರ್ಥವಿಲ್ಲದೆ ರೂಪಾಂತರಗೊAಡಿದೆ. ಈ ಹೆಸರು ಪೋರ್ಚುಗೀಸರ ಆಕ್ರಮಣ, ಬ್ರಿಟಿಷರ ದಾಸ್ಯ, ಪ್ರಾಂತ್ಯದ ಜನರ ಗುಲಾಮಗಿರಿಯನ್ನು ಸೂಚಿಸುತ್ತದೆ. ತಮಿಳರು ತಮ್ಮ ಅಸ್ಮಿತೆಯ ನಗರವನ್ನು ಮದ್ರಾಸ್ ಹೆಸರಿನಿಂದ ಚೆನ್ನೈ ಹೆಸರಿಗೆ ಬದಲಿಸಿಕೊಂಡರು. ಮರಾಠಿಗರು ತಮ್ಮ ಅಸ್ಮಿತೆಯ ನಗರವನ್ನು ಬಾಂಬೆ ಹೆಸರಿನಿಂದ ಮುಂಬಾಯಿ ಹೆಸರಿಗೆ ಬದಲಿಸಿಕೊಂಡರು ಹಾಗೆಯೇ ತುಳುವರ ಅಸ್ಮಿತೆಯ ನಗರವನ್ನು ಮಂಗಳೂರು ಹೆಸರಿನಿಂದ *ಕುಡ್ಲ* ಹೆಸರಿಗೆ ಬದಲಾಯಿಸಬೇಕು. ಹಾಗೆಯೇ ಜಿಲ್ಲೆಗೆ ಜಿಲ್ಲಾ ಕೇಂದ್ರವಾದ *ಕುಡ್ಲ* ಹೆಸರನ್ನು ಇಡುವಂತೆ ವಿನಂತಿಸಲಾಗಿದೆ.












