ಬೆಳ್ತಂಗಡಿ: ಮಲೆನಾಡಿನ ಬಹು ವರ್ಷಗಳ ಕನಸಾದ ಶಿಶಿಲ-ಬೈರಾಪುರ ರಸ್ತೆ ಸಂಪರ್ಕದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಂಸ್ಕಾರ ಭಾರತಿ ಬೆಳ್ತಂಗಡಿ ಮತ್ತು ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಅಧ್ಯಕ್ಷ ಸಂಪತ್ ಸುವರ್ಣ ಅವರು ತಿಳಿಸಿದ್ದಾರೆ.
ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಶಿಶಿಲ-ಬೈರಾಪುರ ರಸ್ತೆ ಕೇವಲ ಎರಡು ಊರನ್ನು ಬೆಸೆಯುವ ರಸ್ತೆಯಲ್ಲ, ಅದು ಮಲೆನಾಡಿನ ಯುವಜನರ ಭವಿಷ್ಯದ ದಾರಿ. ನಮ್ಮ ಮಕ್ಕಳು ಶಿಕ್ಷಣ, ಉದ್ಯೋಗಕ್ಕಾಗಿ 80-100 ಕಿ.ಮೀ ಸುತ್ತಿ ಹೋಗಬೇಕಾದ ದುಸ್ಥಿತಿ ಇದೆ. 20 ನಿಮಿಷದ ದಾರಿಗೆ 3 ಗಂಟೆ ವ್ಯಯವಾಗುತ್ತಿದೆ.
ಇದು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವದ ರಸ್ತೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಶಿಶಿಲ ಕ್ಷೇತ್ರಗಳನ್ನು ಬೆಸೆಯುವ ಪುರಾತನ ಹಾದಿ ಇದು. ಈ ರಸ್ತೆಯಿಂದ ಸ್ಥಳೀಯ ರೈತರು, ಸಣ್ಣ ವ್ಯಾಪಾರಿಗಳು, ಹೋಮ್ ಸ್ಟೇಗಳಿಗೆ ನೇರ ಲಾಭವಾಗಲಿದೆ.
ಪರಿಸರ ಕಾಳಜಿ ನಮಗೂ ಇದೆ. ನಾವು ಕಾಡು ಕಡಿದು ಹೈವೇ ಮಾಡಿ ಎನ್ನುತ್ತಿಲ್ಲ. ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ರಸ್ತೆ ಮಾಡಿ ಎಂದು ಸರ್ಕಾರವನ್ನು ಕೇಳುತ್ತಿದ್ದೇವೆ. ಪರಿಸರ ಮತ್ತು ಅಭಿವೃದ್ಧಿ ಎರಡೂ ಜೊತೆಯಾಗಿ ಸಾಗಬೇಕು.
ನ.2ರಂದು ಅರಸಿನಮಕ್ಕಿಯಲ್ಲಿ ನಡೆಯುವ ಸಮಾವೇಶ ನಾಡಿನ ಹಿತದ ಸಮಾವೇಶ. ಇದಕ್ಕೆ ನಮ್ಮ ಎರಡೂ ಸಂಸ್ಥೆಗಳ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಪಕ್ಷ-ಜಾತಿ ಬೇದ ಮರೆತು ಎಲ್ಲರೂ ಭಾಗವಹಿಸಬೇಕು” ಎಂದು ಮನವಿ ಮಾಡಿದ್ದಾರೆ.











