November 5, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್.ಡಿ.ಎಂ ಕಾಲೇಜು : ‘ಸಂಭ್ರಮ – 2026’ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ – ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಜನಜಾಗೃತಿ ಮುಖ್ಯ: ಪ್ರಮೋದ್ ಮಧ್ವರಾಜ್

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ವಿಕಸಿತ ಭಾರತ–2047ರ ಗುರಿಯನ್ನು ಸಾಕಾರಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರ್ಕಾರ ಹಾಗೂ ವಿವಿಧ ಪಾಲುದಾರರ ಜವಾಬ್ದಾರಿ ಮತ್ತು ಸಹಭಾಗಿತ್ವ ಮಹತ್ವದ ಪಾತ್ರ ವಿಚಾರದ ಕುರಿತು ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ‘ಸಂಭ್ರಮ – 2026′ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕರ್ನಾಟಕ ಸರ್ಕಾರದ ಮಾಜಿ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ವಿಕಸಿತ ಭಾರತ–2047ರ ಗುರಿಯನ್ನು ಸಾಕಾರಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರ್ಕಾರ ಹಾಗೂ ವಿವಿಧ ಪಾಲುದಾರರ ಜವಾಬ್ದಾರಿ ಮತ್ತು ಸಹಭಾಗಿತ್ವ ಮಹತ್ವದ ಪಾತ್ರ ವಹಿಸುತ್ತದೆ.

ಉತ್ತಮ ಆಡಳಿತವೆಂದರೆ ದೇಶದ ಪ್ರತಿಯೊಬ್ಬ ನಾಗರಿಕನ, ಅದರಲ್ಲೂ ಬಡ ಮತ್ತು ದುರ್ಬಲ ವರ್ಗದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದಾಗಿದೆ. ಭ್ರಷ್ಟಾಚಾರವು ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದ್ದು, ಅದನ್ನು ತೊಡೆದು ಹಾಕಲು ಆಡಳಿತ ವ್ಯವಸ್ಥೆಯ ಜೊತೆಗೆ ಜನರಲ್ಲಿಯೂ ಜಾಗೃತಿ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸಬೇಕು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು.

1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸ್ಮರಿಸಿದ ಅವರು, ಅಲ್ಲಿಂದ ಇಂದಿನವರೆಗೆ ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ದೇಶದ ಜನಸಂಖ್ಯೆ ಹೆಚ್ಚಳವು ಸಂಪನ್ಮೂಲಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸುವ ಸವಾಲಾಗಿದ್ದರೂ, ಅದನ್ನು ಸಮರ್ಥವಾಗಿ ಬಳಸಿಕೊಂಡರೆ ದೇಶದ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಬಲ್ಲದು. ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಉದ್ಯೋಗಾವಕಾಶ ದೊರೆಯುವಂತೆ ಮಾಡುವುದು ಅಭಿವೃದ್ಧಿಯ ಪ್ರಮುಖ ಗುರಿಯಾಗಬೇಕು ಎಂದರು.

ಸಮಾಜಕಾರ್ಯ ವಿಭಾಗದ ಜವಾಬ್ದಾರಿಯನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, ಸಮಾಜದ ಅಂಚಿನಲ್ಲಿರುವ ಮತ್ತು ದುರ್ಬಲ ವರ್ಗಗಳ ಸಬಲೀಕರಣದಲ್ಲಿ ಸಮಾಜಕಾರ್ಯ ಪದವೀಧರರ ಪಾತ್ರ ಮಹತ್ವದ್ದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಅನೇಕ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗುವುದರ ಜೊತೆಗೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್. ಪ್ರಭಾಕರ್ ಮಾತನಾಡಿ, ಸರ್ಕಾರ ರೂಪಿಸುವ ನೀತಿಗಳು ಮತ್ತು ಅವುಗಳ ಫಲಾನುಭವಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ. ನೀತಿ ನಿರೂಪಕರು ಮತ್ತು ಜನಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಸಮಾಜಕಾರ್ಯ ಕ್ಷೇತ್ರದವರ ಮೇಲಿದೆ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ಸಕ್ರೀಯವಾಗಿ ಪ್ರಯತ್ನಿಸಬೇಕು ಎಂದರು.

ಸಮಾರಂಭದ ಅಭ್ಯಾಗತರಾಗಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಸಮಾಜದ ದುರ್ಬಲ ವರ್ಗಗಳ ಸಬಲೀಕರಣ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾದ ಪ್ರಸ್ತುತ ವಿಷಯದ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ಬದಲಾವಣೆಗಳಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಸಮಾಜದಲ್ಲಿಯೂ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿ ಮಾದರಿಯನ್ನು ರೂಪಿಸಬೇಕಾಗಿದೆ. ಶಿಕ್ಷಣ ಪೂರ್ಣಗೊಳಿಸಿ ಪದವಿ ಪಡೆಯುವ ಪ್ರತಿಯೊಬ್ಬರೂ ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊಂದಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕಾರ್ಯಗಳು ಸಮುದಾಯದ ಸಬಲೀಕರಣಕ್ಕೆ ಪೂರಕವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ ,
ಶಿಕ್ಷಣ, ಡಿಜಿಟಲ್ ಇಂಡಿಯಾ ಹಾಗೂ ತಂತ್ರಜ್ಞಾನದ ಬೆಳವಣಿಗೆ ದೇಶದ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸಿವೆ. ಇಂತಹ ಸಮ್ಮೇಳನಗಳಲ್ಲಿ ನಡೆಯುವ ಚರ್ಚೆಗಳು ಮತ್ತು ವಿಚಾರ ವಿನಿಮಯಗಳು ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಸಮ್ಮೇಳನದಲ್ಲಿ ರೂಪುಗೊಳ್ಳುವ ಚರ್ಚೆಗಳು ಮತ್ತು ಶಿಫಾರಸುಗಳನ್ನು ನೀತಿ ನಿರೂಪಕರಿಗೆ ಸಲ್ಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಾಗವು 25 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದರು. ವಿಭಾಗದ ಆರಂಭದಿಂದಲೂ ‘ಸಂಭ್ರಮ’ ಹೆಸರಿನಲ್ಲಿ ಪ್ರತಿವರ್ಷ ವಿಭಿನ್ನ ವಿಷಯಗಳ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಸಮಾಜಕಾರ್ಯ ಕ್ಷೇತ್ರದ ಸಮಕಾಲೀನ ವಿಚಾರಗಳ ಕುರಿತು ಚರ್ಚೆ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿಚಾರ ಸಂಕಿರಣ ಅಂಗವಾಗಿ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಪ್ರದರ್ಶಿಸಲು ರೀಲ್ಸ್ ತಯಾರಿಕೆ, ಸಂಶೋಧನಾ ಪ್ರಬಂಧ ಮಂಡನೆ (Paper Presentation), ಉತ್ತಮ ಕೌನ್ಸಿಲರ್ , ಉತ್ತಮ ವ್ಯವಸ್ಥಾಪಕ , ಬೀದಿ ನಾಟಕ ಹಾಗೂ ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಬೆಂಗಳೂರು, ಹಾಸನ , ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರು, ಪಿಜಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಉಪ ಪ್ರಾಚಾರ್ಯರಾದ ನಂದ ಕುಮಾರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಕಾಲೇಜಿನ ಚರಿಷ್ಮಾ ಮತ್ತು ತಂಡದವರು ಪ್ರಾರ್ಥಿಸಿದರು. ಡಾ. ಅಕ್ಷತಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ರಾಜೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ಅಥುಲ್ ಎಸ್ ವಂದಿಸಿದರು. ವಿಭಾಗದ ಮುಖ್ಯಸ್ಥ ಹಾಗು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಚೇರ್ಮನ್ ಡಾ. ರವಿಶಂಕರ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Related posts

ನಿಟ್ಟಡೆ ಕುಂಭಶ್ರೀ ಶಾಲಾ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಎಸ್‌ಡಿಎಂ ಎನ್ ಎಸ್ ಎಸ್ ಘಟಕದ ಸ್ವಯಂ ಸೇವಕರಿಗೆ ಕೆಸರ್‌ಡೊಂಜಿ ದಿನ ಕ್ರೀಡಾಕೂಟ

Suddi Udaya

ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜಿಗೆ ಶೇ.97.27 ಫಲಿತಾಂಶ : ತುಷಾರ ಬಿ.ಎಸ್ ರಾಜ್ಯಕ್ಕೆ 5 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳಾಲು ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮ

Suddi Udaya

ಫೆ.9-10: ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ: ವಿವಿಧ ದೇಶ-ರಾಜ್ಯದಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು ಭಾಗಿ

Suddi Udaya

ಪಿಯುಸಿ ಫಲಿತಾಂಶ: ಎಸ್‌ಡಿಎಂ ಪ.ಪೂ. ‘ರೋವರ್ಸ್ ಮತ್ತು ರೇಂಜರ್ಸ್’ ಘಟಕದ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Suddi Udaya
error: Content is protected !!