November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ

ಉಜಿರೆ: ಪ್ರತಿಷ್ಠಿತ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ ಉತ್ತಮ ಗುಣನಡತೆ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು. ಸಮಾಜಸೇವೆ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ವಲಯದ ಅರಣ್ಯಾಧಿಕಾರಿ ಹೆಚ್.ಪಿ. ರಾಘವೇಂದ್ರ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಹಲವು ಹಕ್ಕುಗಳನ್ನು ನೀಡಿದೆ. ಆ ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ಸಂವಿಧಾನವು ಸೂಚಿಸಿರುವ ಕರ್ತವ್ಯಗಳನ್ನೂ ಸಮಾನ ಜವಾಬ್ದಾರಿಯಿಂದ ಪಾಲಿಸಬೇಕು. ದೇಶದ ಅಭಿವೃದ್ಧಿ ಮತ್ತು ಸಮಾಜದ ಸುಸ್ಥಿರತೆಗೆ ನಾಗರಿಕರ ಜವಾಬ್ದಾರಿಯುತ ನಡವಳಿಕೆ ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜದ ಹಿತದೃಷ್ಟಿಯಿಂದಲೂ ಚಿಂತಿಸಬೇಕು. ಸಮಾಜಸೇವೆ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದ ಅವರು, ನಮ್ಮ ಹಿರಿಯ ತಲೆಮಾರು ನಮಗೆ ನೀಡಿರುವ ನೈಸರ್ಗಿಕ ಸಂಪತ್ತು ಅಮೂಲ್ಯ ಕೊಡುಗೆಯಾಗಿದೆ. ಅರಣ್ಯ, ಜಲಸಂಪನ್ಮೂಲ, ವನ್ಯಜೀವಿಗಳು ಹಾಗೂ ಪ್ರಕೃತಿಯ ಇತರ ಸಂಪನ್ಮೂಲಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಿರಿಯರು ಉಳಿಸಿ ಬೆಳೆಸಿದ ಪರಿಸರ ಸಂಪತ್ತನ್ನು ಮುಂದಿನ ಪೀಳಿಗೆಗೂ ಅದೇ ರೀತಿಯಲ್ಲಿ ಅಥವಾ ಇನ್ನಷ್ಟು ಉತ್ತಮ ಸ್ಥಿತಿಯಲ್ಲಿ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು. ಪರಿಸರ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನೂ ಅದರಲ್ಲಿ ಪಾಲುದಾರನಾಗಬೇಕು ಎಂದು ಹೇಳಿದರು.

ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ಸಂಪ್ರದಾಯಗಳು ಮತ್ತು ಸಂಸ್ಕೃತಿಯಲ್ಲಿ ಅಪಾರವಾದ ಜ್ಞಾನ ಅಡಕವಾಗಿದೆ. ಅವುಗಳನ್ನು ಅರ್ಥಮಾಡಿಕೊಂಡು ಗೌರವಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಮಹತ್ವವಿದ್ದು, ಯಾವುದೇ ಜೀವಿಯನ್ನು ಕಡೆಗಣಿಸದೆ ಪರಿಸರದ ಸಮತೋಲನವನ್ನು ಕಾಪಾಡುವುದು ಅಗತ್ಯವಾಗಿದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ನಮಗೆ ಬದುಕಿನ ಹಲವು ಪಾಠಗಳನ್ನು ಕಲಿಸುತ್ತದೆ. ಅವುಗಳಲ್ಲಿ ಸ್ವಾವಲಂಬಿ ಜೀವನ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳು ಪ್ರಮುಖವಾಗಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಾರ್ಷಿಕೋತ್ಸವ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸಾಧನೆ, ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಭೇಟಿ, ಕ್ಯಾಂಪಸ್ ನೇಮಕಾತಿ ಸೇರಿದಂತೆ ಇತ್ಯಾದಿ ಬೆಳವಣಿಗೆಗಳ ಶೈಕ್ಷಣಿಕ ವರದಿಯನ್ನು ಅತಿಥಿಗಳು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದಲ್ಲಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಮೆಕ್ಯಾನಿಕಲ್ ವಿಭಾಗದ ಸಾಯಿ ಚರಣ್
ಹಾಗೂ ಸಿವಿಲ್ ವಿಭಾಗದ ಪ್ರವೀಣ್ ಪ್ರಶಸ್ತಿಗಳನ್ನು ವಾಚಿಸಿದರು. ಬಳಿಕ ಅತಿಥಿಗಳಾದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ವಲಯದ ಅರಣ್ಯಾಧಿಕಾರಿ ಹೆಚ್.ಪಿ. ರಾಘವೇಂದ್ರ ರವರನ್ನು ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ನಿಖಿತ್ ಜೈನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಉಪನ್ಯಾಸಕ ಸಂಪತ್ ಕುಮಾರ್ ಕೆ. ನಿರೂಪಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ರೆನಿಟಾ ವಂದಿಸಿದರು. ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್ ಸಂಯೋಜಿಸಿದರು.

Related posts

ತೆಂಗಿನಕಾಯಿ ಕೀಳಲು ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದ ಸಾವು: ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya

ಕೊಕ್ಕಡದಲ್ಲಿ ವಾಹನ ದಟ್ಟನೆಗೆ ಸವಾರರು ಹೈರಾಣು

Suddi Udaya

ಮುಂಡಾಜೆ ಮಂಜುಶ್ರೀ ಭಜನಾ ಮಂದಿರದ ವತಿಯಿಂದ ಭಜನಾ ಮಂಡಳಿಯ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಗರ್ಡಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣಕ್ಕೆ ಹಾಗೂ ಬಂಗಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರಕ್ಕೆ ರೂ. 95.58 ಲಕ್ಷ ಸರಕಾರದಿಂದ ಅನುದಾನ ಬಿಡುಗಡೆ

Suddi Udaya

ಬಿಜೆಪಿಗರೇ, ಸರ್ಕಾರದ ವಿರುದ್ಧ ಸುಳ್ಳು ಆರೋಪ ನಿಲ್ಲಿಸಿ, ತಾಲೂಕಿಗೆ ನೀಡಿದ ಅಭಿವೃದ್ಧಿ, ಯೋಜನೆ ಗಮನಿಸಿ: ಅಭಿವೃದ್ಧಿ ಅನುದಾನಗಳ ಪಟ್ಟಿಗಳೊಂದಿಗೆ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಪೋಸ್ಟರ್ ಅಭಿಯಾನ

Suddi Udaya

ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಮಾಶಾಸನ ಹೆಚ್ಚಳ ಮತ್ತು ಮಹಿಳಾ ದೌರ್ಜನ್ಯ ಖಂಡಿಸಿ ಮನವಿ

Suddi Udaya
error: Content is protected !!