November 12, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಾಧಕರು

ಬಳಂಜದಲ್ಲಿ ಕೆ. ವಸಂತ ಸಾಲಿಯಾನ್, ಹೆಚ್. ಧರ್ಣಪ್ಪ ಪೂಜಾರಿಗೆ ಅದ್ದೂರಿ ಹುಟ್ಟೂರ ಪೌರ ಸನ್ಮಾನ

ಬಳಂಜ:ಗ್ರಾಮದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರದ್ಧೆ ಮತ್ತು ಬದ್ಧತೆಯನ್ನು ಬೆಳೆಸುವಲ್ಲಿ ಹುಟ್ಟೂರ ಪೌರ ಸನ್ಮಾನ ಸ್ವೀಕರಿಸಿದ ಕೆ. ವಸಂತ ಸಾಲಿಯಾನ್ ಮತ್ತು ಹೆಚ್. ಧರ್ಣಪ್ಪ ಪೂಜಾರಿ ಅವರ ಕೊಡುಗೆ ಅಪಾರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.

ನ.8ರಂದು ಬಳಂಜ ಶಾಲೆಯಲ್ಲಿ ನಡೆದ ಶಾಲೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ, ಬಳಂಜ ಗ್ರಾಮೋತ್ಸವ, ‘ಅಮೃತ ಸಿಂಧು’ ಸ್ಮರಣ ಸಂಚಿಕೆ ಬಿಡುಗಡೆ, ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ನಡೆದ ಕೆ. ವಸಂತ ಸಾಲಿಯಾನ್ ಮತ್ತು ಹೆಚ್. ಧರ್ಣಪ್ಪ ಪೂಜಾರಿ ಅವರಿಗೆ ಆಯೋಜಿಸಿದ್ದ ಹುಟ್ಟೂರ ಪೌರ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಬರೋಡದ ಪ್ರಸಿದ್ಧ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐದು ದಶಕಗಳಿಗೂ ಹೆಚ್ಚು ಕಾಲ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿರುವ ಇಬ್ಬರು ಹಿರಿಯ ಸಾಧಕರನ್ನು ಹುಟ್ಟೂರಿನ ಜನತೆ ಒಗ್ಗಟ್ಟಿನಿಂದ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಗೌರವಗಳು ಮುಂದಿನ ಪೀಳಿಗೆಗೆ ಸಾಧನೆ ಮತ್ತು ಸಮಾಜಸೇವೆಯ ಮಹತ್ವವನ್ನು ತಿಳಿಸಿಕೊಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಈ ಇಬ್ಬರು ಹಿರಿಯರು ತಮ್ಮ ದೂರದೃಷ್ಟಿ, ಸಮಾಜಮುಖಿ ಚಿಂತನೆ, ನಿಸ್ವಾರ್ಥ ಸೇವೆ ಮತ್ತು ಸಂಘಟನಾ ಸಾಮರ್ಥ್ಯದ ಮೂಲಕ ಬಳಂಜ ಗ್ರಾಮದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರು ಬಳಂಜದ ಎರಡು ಅಮೂಲ್ಯ ರತ್ನಗಳು. ಇವರ ಸಾಮಾಜಿಕ ಬದ್ಧತೆ ಹಾಗೂ ನಾಯಕತ್ವದ ಗುಣಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.

ವೇದಿಕೆಯಲ್ಲಿ ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಆರ್. ಭಾಸ್ಕರ ಕೋಟ್ಯಾನ್, ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ವಿದ್ವತ್ ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ.ಎಸ್., ಡಾ. ಹೇಮಂತ್ ರೈ ಮನವಳಿಕೆಗುತ್ತು, ಉಮಾ ಬಾಲಕೃಷ್ಣ ಹೆಗ್ಡೆ ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳದ ಭಜಬಲಿ, ಉದ್ಯಮಿ ಜಯಂತ್ ಶೆಟ್ಟಿ ಮಡಂತ್ಯಾರು, ಅರುಣ ಹೆಗ್ಡೆ ಕುಳೆಂಜಿರೋಡಿಗುತ್ತು, ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ. ಚಂದ್ರಮ, ಮುಖ್ಯ ಶಿಕ್ಷಕರಾದ ಸುಲೋಚನ ಮತ್ತು ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಅಶ್ವಥ್ ಹೆಗ್ಡೆ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ಕಾಪಿನಡ್ಕ ಕೃತಜ್ಞತಾ ನುಡಿಗಳನ್ನಾಡಿದರು . ದಿನೇಶ್ ಪಿ.ಕೆ. ವಂದಿಸಿದರು. ಸಂಜೆ ವೈಭವಪೂರ್ಣ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು, ನೃತ್ಯ ವೈಭವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿದವು.

ಬಳಂಜದ ಎರಡು ಅಮೂಲ್ಯ ರತ್ನಗಳು: ಶಾಸಕ ಹರೀಶ್ ಪೂಂಜ

ಕೆ. ವಸಂತ ಸಾಲಿಯಾನ್ ಮತ್ತು ಹೆಚ್. ಧರ್ಣಪ್ಪ ಪೂಜಾರಿ ಅವರ ಕೊಡುಗೆ ಕೇವಲ ಬಳಂಜಕ್ಕೆ ಸೀಮಿತವಾಗದೆ ಇಡೀ ಬೆಳ್ತಂಗಡಿ ತಾಲೂಕಿಗೆ ವಿಸ್ತರಿಸಿದೆ. ಜನಜಾಗೃತಿ ವೇದಿಕೆಯ ಮೂಲಕ ಸಮಾಜಕ್ಕೆ ಪ್ರೇರಣಾದಾಯಕ ಕೆಲಸಗಳನ್ನು ಮಾಡಿರುವ ವಸಂತ ಸಾಲಿಯಾನ್ ಅವರ ಸೇವೆ ವಿಶೇಷವಾದುದು. ಅವರ ಹಾದಿಯಲ್ಲೇ ಪುತ್ರ ಸಂತೋಷ್ ಕುಮಾರ್ ಕೂಡ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಧರ್ಣಪ್ಪ ಪೂಜಾರಿ ಅವರು ರಾಜಕೀಯ ಕ್ಷೇತ್ರದಲ್ಲಿ ಮಾದರಿ ಹಾಗೂ ಪ್ರೇರಣಾದಾಯಿ ವ್ಯಕ್ತಿತ್ವ. ಆಸ್ತಿ, ಬಂಗಾರ ಶಾಶ್ವತವಲ್ಲ, ಜೀವನದಲ್ಲಿ ಸಾಮಾಜಿಕ ಬದ್ಧತೆ ಮತ್ತು ಸಮಾಜಕ್ಕೆ ನೀಡುವ ಕೊಡುಗೆ ಮುಖ್ಯ. ಈ ಇಬ್ಬರೂ ಬಳಂಜದ ಅಮೂಲ್ಯ ರತ್ನಗಳು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬಳಂಜದ ಜೊತೆ ಸದಾ ನಾನಿದ್ದೇನೆ: ಶಶಿಧರ ಶೆಟ್ಟಿ ನವಶಕ್ತಿ

ಬಳಂಜ ಸುಂದರವಾದ ಗ್ರಾಮವಾಗಿದ್ದು, ಇಲ್ಲಿ ಅನೇಕ ಸಾಧಕರು ರೂಪುಗೊಂಡಿದ್ದಾರೆ. ಕೆ. ವಸಂತ ಸಾಲಿಯಾನ್ ಮತ್ತು ಹೆಚ್. ಧರ್ಣಪ್ಪ ಪೂಜಾರಿ ಅವರಿಗೆ ನಡೆದ ಹುಟ್ಟೂರ ಪೌರ ಸನ್ಮಾನವು ಅವರ ಸೇವೆ ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವಾಗಿದೆ. ಬಳಂಜದ ಅಭಿವೃದ್ಧಿಯೊಂದಿಗೆ ನಾನು ಸದಾ ಇದ್ದು, ಗ್ರಾಮದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತೇನೆ ಎಂದು ಬರೋಡದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಹೇಳಿದರು.

ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಹಿರಿಯರು: ಅನಿಲ್ ಕುಮಾರ್ ಎಸ್.ಎಸ್.

ಕೆ. ವಸಂತ ಸಾಲಿಯಾನ್ ಮತ್ತು ಹೆಚ್. ಧರ್ಣಪ್ಪ ಪೂಜಾರಿ ಅವರು ಈ ನಾಡಿಗೆ ಹಾಗೂ ತಮ್ಮ ಹುಟ್ಟೂರಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ಹಿರಿಯ ಸಾಧಕರನ್ನು ಊರಿನ ಬಂಧುಗಳು ಒಗ್ಗಟ್ಟಿನಿಂದ ಆಧರಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ. ವಿಶೇಷವಾಗಿ ಕೆ. ವಸಂತ ಸಾಲಿಯಾನ್ ಅವರು ಜನಜಾಗೃತಿ ವೇದಿಕೆಯ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸೇವೆಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರೂ ಮೆಚ್ಚಿ ಗೌರವಿಸಿದ್ದಾರೆ. ಇಂತಹ ಅಮೂಲ್ಯ ರತ್ನಗಳು ನಮ್ಮ ನಡುವೆ ಇರುವುದು ನಮ್ಮ ಭಾಗ್ಯ ಎಂದು ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

Related posts

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

Suddi Udaya

ಸುನ್ನೀ ಕೋರ್ಡಿನೇಷನ್ ಸಮಿತಿಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಚಿಣ್ಣರ ಉತ್ಸವ

Suddi Udaya

ಕುವೆಟ್ಟು : ಪಯ್ಯೊಟ್ಟು ನಿವಾಸಿ ಸೀತಾರಾಮ ಪೂಜಾರಿ ನಿಧನ

Suddi Udaya

ಇಂದಬೆಟ್ಟು ಗ್ರಾ.ಪಂ.ನಲ್ಲಿ ಆರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಹಾಗೂ ಸ್ವಚ್ಛತಾ ಹಿ ಸೇವಾ ಆಂದೋಲನ

Suddi Udaya

ಮಡಂತ್ಯಾರು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಮಾವೇಶದ ಪೂರ್ವಭಾವಿ ಸಭೆ

Suddi Udaya
error: Content is protected !!