November 16, 2026
Uncategorized

ಡಾ.ಮೋಹನ ಆಳ್ವರ ಅಮೃತ ಮಹೋತ್ಸವಕ್ಕೆ 15 ಕೋಟಿ ರೂ.ಗಳ ಸಮಾಜಮುಖಿ ಯೋಜನೆಗಳ ಸಂಕಲ್ಪ- ಉದ್ಯಮಿ‌ ಶಶಿಧರ ಶೆಟ್ಟಿ: ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ಅಭಿವೃದ್ಧಿ, 10 ಸಾವಿರ ಮಂದಿಗೆ ಉಚಿತ ಡಯಾಲಿಸಿಸ್, ವೃದ್ಧರ ಘನತೆಯ ಬದುಕಿಗೆ ‘ಹ್ಯಾಪಿ ಡೆತ್’ ಯೋಜನೆ: ಫೆ. 13ರಂದು ಮೂಡುಬಿದಿರೆಯಲ್ಲಿ ಅಮೃತ ಮಹೋತ್ಸವ; ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ಗುರುದಕ್ಷಿಣೆ ನಿಧಿ ಸಂಗ್ರಹದ ಚಿಂತನೆ

ಮೂಡುಬಿದಿರೆ: ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆಯ ಮೂಲಕ ಕರಾವಳಿ ಮಾತ್ರವಲ್ಲದೆ ರಾಜ್ಯದಾದ್ಯಂತ ವಿಶಿಷ್ಟ ಛಾಪು ಮೂಡಿಸಿರುವ ಡಾ. ಎಂ. ಮೋಹನ ಆಳ್ವ ಅವರ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವ ಸೇವಾ ಸಂಕಲ್ಪದೊಂದಿಗೆ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 15 ಕೋಟಿ ರೂ. ವೆಚ್ಚದ ಸಮಾಜಮುಖಿ ಯೋಜನೆಗಳನ್ನು ರೂಪಿಸುವ ಚಿಂತನೆ ನಡೆಸಲಾಗಿದ್ದು, ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿ, 10 ಸಾವಿರ ಮಂದಿಗೆ ಉಚಿತ ಡಯಾಲಿಸಿಸ್ ಹಾಗೂ ವೃದ್ಧರ ಘನತೆಯ ಬದುಕಿಗೆ ನೆರವಾಗುವ ‘ಹ್ಯಾಪಿ ಡೆತ್’ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಶಯ ಹೊಂದಲಾಗಿದೆ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡ ತಿಳಿಸಿದರು.

ಡಾ. ಎಂ. ಮೋಹನ ಆಳ್ವ ಅಭಿನಂದನಾ ಸಮಿತಿ–2027ರ ಆಶ್ರಯದಲ್ಲಿ ಶನಿವಾರ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆದ ಅಮೃತ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ಮೋಹನ ಆಳ್ವರು ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಯ ಮೂಲಕ ಸಾವಿರಾರು ಜನರ ಬದುಕಿಗೆ ಬೆಳಕಾಗಿದ್ದಾರೆ. ಅವರ ಸೇವಾ ಮನೋಭಾವ, ದೂರದೃಷ್ಟಿ ಹಾಗೂ ಸಮಾಜಮುಖಿ ಚಿಂತನೆ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಅಮೃತ ಮಹೋತ್ಸವವನ್ನು ಕೇವಲ ಅಭಿನಂದನೆ, ಸನ್ಮಾನ ಮತ್ತು ಸಂಭ್ರಮಕ್ಕೆ ಸೀಮಿತಗೊಳಿಸದೆ, ಜನಸಾಮಾನ್ಯರಿಗೆ ಅನುಕೂಲವಾಗುವ ಶಾಶ್ವತ ಸೇವಾ ಯೋಜನೆಗಳ ಮೂಲಕ ಅರ್ಥಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಆಳ್ವರ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುದಕ್ಷಿಣೆ ಸಲ್ಲಿಸುವ ವಿನೂತನ ಪರಿಕಲ್ಪನೆಯಡಿ ನಿಧಿ ಸಂಗ್ರಹಿಸುವ ಚಿಂತನೆಯೂ ಇದೆ. ಈ ಮೂಲಕ ಸಂಗ್ರಹವಾಗುವ ನಿಧಿಯನ್ನು ಆರೋಗ್ಯ ಸೇವಾ ಯೋಜನೆಗಳಿಗೆ ವಿನಿಯೋಗಿಸುವ ಆಶಯವಿದೆ ಎಂದರು.

ಸಮಾಜಕ್ಕೆ ಕೊಡುಗೆಯಾಗಲಿ ಅಮೃತ ಮಹೋತ್ಸವ: ಡಾ. ಮೋಹನ ಆಳ್ವತಮ್ಮ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಗೆ ಮುಂದಾಗಿರುವ ಆತ್ಮೀಯರು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಡಾ. ಎಂ. ಮೋಹನ ಆಳ್ವ, ತಮ್ಮ ಸಾಧನೆ ಕೇವಲ ವೈಯಕ್ತಿಕ ಪರಿಶ್ರಮದ ಫಲವಲ್ಲ. ಎಲ್ಲರ ಸಹಕಾರ, ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದಗಳೇ ಈ ಹಾದಿಯಲ್ಲಿ ಶಕ್ತಿಯಾಗಿವೆ. ಜೀವನದ ಪ್ರತಿಕ್ಷಣವನ್ನೂ ಹೊಸತನ್ನು ಕಾಣುವ, ಒಳಿತನ್ನು ಬಯಸುವ ಆಶಯದೊಂದಿಗೆ ಕಳೆದಿದ್ದೇನೆ. ಅಮೃತ ಮಹೋತ್ಸವವು ಕೇವಲ ಜನ್ಮದಿನದ ಆಚರಣೆಯಾಗದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಾಗೂ ಉನ್ನತ ಜೀವನಮೌಲ್ಯಗಳನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಬೇಕು. ಯಾವುದೇ ವೈಭವದ ಅಥವಾ ವಿಜೃಂಭಣೆಯ ಸಮಾರಂಭವನ್ನು ಬಯಸುವುದಿಲ್ಲ. ಬದಲಾಗಿ, ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯಗಳ ಮೂಲಕ ಈ ದಿನವನ್ನು ಸಾರ್ಥಕಗೊಳಿಸಬೇಕು. ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳೇ ನನಗೆ ದೊರೆಯುವ ಅತ್ಯಮೂಲ್ಯ ಕೊಡುಗೆ ಎಂದರು.

ಮೋಹನ ಆಳ್ವರ ಕನಸುಗಳಿಗೆ ಎಲ್ಲರೂ ಕೈಜೋಡಿಸೋಣ: ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಡಾ. ಮೋಹನ ಆಳ್ವರ ಕನಸುಗಳು ವಿಶಾಲವಾಗಿದ್ದು, ಅವುಗಳಿಗೆ ಎಲ್ಲರೂ ಒಗ್ಗೂಡಿ ಜೀವ ತುಂಬಬೇಕಿದೆ. ಅವರ ಅಭಿನಂದನಾ ಕಾರ್ಯಕ್ರಮ ಮತ್ತು ಅಮೃತ ಮಹೋತ್ಸವವು ಕೇವಲ ಒಂದು ಸಮಾರಂಭಕ್ಕೆ ಸೀಮಿತವಾಗದೆ, ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯವಾಗಿ ಹೊರಹೊಮ್ಮಲಿದೆ. ಇಂತಹ ಸಾರ್ಥಕ ಕಾರ್ಯದಲ್ಲಿ ಪೇಜಾವರ ಮಠವೂ ಭಾಗಿಯಾಗುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿ, ಒಂದು ಲಕ್ಷ ರೂ.ಗಳ ಕೊಡುಗೆಯನ್ನು ಘೋಷಿಸಿದರು.

ಸಾಧಕರಿಗೆ ಗೌರವ ಸಲ್ಲಿಸುವ ಸಾರ್ಥಕ ಪ್ರಯತ್ನ: ಡಾ. ಪ್ರಕಾಶ್ ಶೆಟ್ಟಿಅಧ್ಯಕ್ಷತೆ ವಹಿಸಿದ್ದ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, ಕರಾವಳಿಯ ಹೆಮ್ಮೆಯ ಸಾಧಕರಾದ ಮೋಹನ ಆಳ್ವರ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಜವಾಬ್ದಾರಿ ವಹಿಸಿರುವುದು ಸೌಭಾಗ್ಯ. ಅವರ ಬಹುಮುಖ ಸಾಧನೆ, ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಸೇವಾ ಮನೋಭಾವಕ್ಕೆ ಅರ್ಥಪೂರ್ಣ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮೂಡುಬಿದಿರೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸುವಲ್ಲಿ ಮೋಹನ ಆಳ್ವರ ಕೊಡುಗೆ ಮಹತ್ವದ್ದಾಗಿದೆ. ಅವರ ಸಮಾಜಮುಖಿ ಬದುಕು ಮತ್ತು ನಿರಂತರ ಕ್ರಿಯಾಶೀಲತೆ ಎಲ್ಲರಿಗೂ ಮಾದರಿ ಎಂದರು.

ಚಂದ್ರಹಾಸ ಶೆಟ್ಟಿ ಮಾತನಾಡಿ, ಮೋಹನ ಆಳ್ವರ ಸರಳ ವ್ಯಕ್ತಿತ್ವ ಮತ್ತು ಸೇವಾ ಮನೋಭಾವಕ್ಕೆ ಗೌರವ ಸಲ್ಲಿಸುವ ರೀತಿಯಲ್ಲಿ ಅಮೃತ ಮಹೋತ್ಸವ ಆಯೋಜಿಸಲಾಗುತ್ತಿದೆ. ಯಾವುದೇ ದುಂದು ವೆಚ್ಚಕ್ಕೆ ಅವಕಾಶ ನೀಡದೆ, ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳಿಗೆ ನಿಧಿ ಸಂಗ್ರಹಿಸಿ, ಎಲ್ಲ ಹಿತೈಷಿಗಳು ಮತ್ತು ಅಭಿಮಾನಿಗಳು ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಫೆ. 13ರಂದು ಮೂಡುಬಿದಿರೆಯಲ್ಲಿ ಅಮೃತ ಮಹೋತ್ಸವ2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ಅಮೃತ ಮಹೋತ್ಸವ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಶಶಿಧರ ಶೆಟ್ಟಿ ಬರೋಡ ಮತ್ತು ಚಂದ್ರಹಾಸ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಆಯ್ಕೆಯಾದರು.ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೃಷ್ಣ ಪಾಲೇಮಾರ್, ಬಿ. ನಾಗರಾಜ ಶೆಟ್ಟಿ, ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣರು, ಎಂ.ಬಿ. ಪುರಾಣಿಕ್, ಶ್ರೀಪತಿ ಭಟ್, ಮೀನಾಕ್ಷಿ ಆಳ್ವ ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು.

Related posts

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ಬ್ರಿಜೇಶ್ ಚೌಟ ಬೇಟಿ

Suddi Udaya

ಬೆಳಾಲು ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ: ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಭೇಟಿ

Suddi Udaya

ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ

Suddi Udaya

ಲಾಯಿಲ ಪಡ್ಲಾಡಿ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡ ಮರ ಕಸ ಕಡ್ಡಿ ತೆರವು: ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ:

Suddi Udaya

ಮಡಂತ್ಯಾರು ವಲಯದ ಮಚ್ಚಿನ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!