November 28, 2026
ಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿಸಾಧಕರು

ಸಂಪತ್ ಬಿ. ಸುವರ್ಣ ಅವರಿಗೆ ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿ-ಇಂದು (ನ.27) ಸಂಜೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಯುವ ಉದ್ಯಮಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸುವರ್ಣ ರೆಸಾರ್ಟ್‌ನ ಮಾಲಕ ಸಂಪತ್ ಬಿ. ಸುವರ್ಣ ಅವರು ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜಯವಾಣಿ ವತಿಯಿಂದ ನೀಡಲಾಗುವ ಈ ಗೌರವವನ್ನು ನವೆಂಬರ್ 27ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸ್ವೀಕರಿಸಲಿದ್ದಾರೆ.

ಯುವ ಉದ್ಯಮಿಯಾಗಿ ಮಾತ್ರವಲ್ಲದೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಸಂಪತ್ ಬಿ. ಸುವರ್ಣ ಅವರು ಭಾರತೀಯ ಜನತಾ ಪಾರ್ಟಿಯ ನಾಯಕರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಅಂತರಾಷ್ಟ್ರೀಯ ಜೆಸಿಐ ಸಂಸ್ಥೆಯಲ್ಲಿ ಪ್ರಮುಖ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿರುವ ಅವರು, ಸಂಘಟನಾ ಸಾಮರ್ಥ್ಯ, ನಾಯಕತ್ವ ಹಾಗೂ ಕ್ರಿಯಾಶೀಲತೆಯಿಂದ ಗಮನ ಸೆಳೆದಿದ್ದಾರೆ. ಜೆಸಿ ಸಂಸ್ಥೆಯಲ್ಲಿ ಸಲ್ಲಿಸಿದ ಸಾಧನೆಯನ್ನು ಗುರುತಿಸಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

ನಾಡಿನ ಕಲೆ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಉಳಿವು ಮತ್ತು ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಸಂಪತ್ ಸುವರ್ಣ ಅವರು, ನಾಡಿನ ಸಾಧಕರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ‘ರಂಗ ಸಮ್ಮಾನ್’ ಪ್ರಶಸ್ತಿಯನ್ನು ಆರಂಭಿಸಿ ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಗ್ರಾಮೀಣ ಭಾಗದ ಸುಮಾರು ಸಾವಿರ ಸಾಧಕರನ್ನು ಪರಿಚಯಿಸಿ ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಹಲವಾರು ದೇವಸ್ಥಾನ ಹಾಗೂ ದೈವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನೀಡುತ್ತಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿದ್ದಾರೆ.

ಜನಪದೀಯ ಸಮ್ಮೇಳನ ‘ಜೀಟಿಗೆ’, ದೈವಾರಾಧಕರ ಸಮ್ಮೇಳನ ‘ಪರ್ವ’ ಹಾಗೂ ಯುವ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ‘ಡೆನ್ನಾನ, ಡೆನ್ನಾನ’ ಕಾರ್ಯಕ್ರಮಗಳ ಮೂಲಕ ವಿನೂತನ ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಕಾರ್ಯಕ್ರಮಗಳು ತುಳುನಾಡಿನ ವಿಶಿಷ್ಟ ಕಲೆ, ಸಂಸ್ಕೃತಿ, ಆಚರಣೆ ಮತ್ತು ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಗಳಾಗಿವೆ.

ತುಳುನಾಡಿನ ಸಾಂಸ್ಕೃತಿಕ ವೈಭವ ಹಾಗೂ ಪ್ರಾಚೀನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ದೂರದೃಷ್ಟಿಯೊಂದಿಗೆ ಹಲವು ಮಹತ್ವದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಯಕ್ಷಗಾನ ಕಲೆಗೆ ರಾಜ್ಯಕಲೆಯ ಸ್ಥಾನಮಾನ ನೀಡಬೇಕು, ದೈವಾರಾಧನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ತುಳುನಾಡಿನ ಅರಮನೆಗಳು ಹಾಗೂ ವಿವಿಧ ಪ್ರಾಚೀನ ಪರಂಪರೆಗಳನ್ನು ಪರಿಚಯಿಸುವ ಮ್ಯೂಸಿಯಂ ನಿರ್ಮಿಸಬೇಕು ಎಂಬುದು ಅವರ ಪ್ರಮುಖ ಆಶಯವಾಗಿದೆ.ಅಲ್ಲದೆ, ತುಳುನಾಡಿನ ಜನಪದ ಜ್ಞಾನ, ಸಂಧಿ, ಪಾಡ್ದನ ಹಾಗೂ ಬೀರಗಳಂತಹ ಪರಂಪರೆಯ ಸಾಂಸ್ಕೃತಿಕ ಸಂಪತ್ತನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಪರಿಚಯಿಸುವ ಮೂಲಕ ಮಕ್ಕಳಿಗೆ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಹೊಸತನದ ಚಿಂತನೆ, ವಿನೂತನ ಕಾರ್ಯಕ್ರಮಗಳ ಆಯೋಜನೆ, ಸಾಧಕರಿಗೆ ಪ್ರೋತ್ಸಾಹ, ಯುವ ಪ್ರತಿಭೆಗಳ ಅನಾವರಣ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಗಳ ಮೂಲಕ ಸಂಪತ್ ಬಿ. ಸುವರ್ಣ ಅವರು ಬಹುಮುಖ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಉದ್ಯಮ, ಸಂಘಟನೆ, ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಯನ್ನು ಸಮನ್ವಯಗೊಳಿಸಿಕೊಂಡು ಸಾಗುತ್ತಿರುವ ಅವರ ಕಾರ್ಯಚಟುವಟಿಕೆಗಳು ಯುವ ಸಮುದಾಯಕ್ಕೆ ಪ್ರೇರಣೆಯಾಗಿವೆ.

ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಅವರ ನಿರಂತರ ಪರಿಶ್ರಮ, ದೂರದೃಷ್ಟಿ ಹಾಗೂ ಸಮಾಜಮುಖಿ ಸೇವೆಗೆ ‘ವಿಜಯರತ್ನ’ ಪ್ರಶಸ್ತಿಯ ರೂಪದಲ್ಲಿ ಅಂತರಾಷ್ಟ್ರೀಯ ಮಟ್ಟದ ಗೌರವ ದೊರೆತಿರುವುದು ಅಭಿನಂದನೀಯವಾಗಿದೆ. ನವೆಂಬರ್ 27ರಂದು ಬಾಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

Related posts

ಪಿಡಿಒ ಪುರುಷೋತ್ತಮ್‌ರಿಗೆ ಮಾತೃ ವಿಯೋಗ

Suddi Udaya

1994-96 ರ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Suddi Udaya

ಗುಂಡೇರಿ ಲಯನ್ಸ್ ಬಸ್ ತಂಗುದಾನದಲ್ಲಿದ್ದ ಶ್ರೀ ಕೃಷ್ಣನ ಮೂರ್ತಿ ತೆರವು,: ಲಯನ್ಸ್ ಕ್ಲಬ್ ಅದ್ಯಕ್ಷ ದೇವದಾಸ್ ಶೆಟ್ಟಿ ನೇತೃತ್ವದಲ್ಲಿ ಪವಿತ್ರ ಪಲ್ಗುಣಿ ನದಿಯಲ್ಲಿ ಮೂರ್ತಿ ವಿಸರ್ಜನೆ

Suddi Udaya

ಅ.6: ಬಳಂಜದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಶಾರದೋತ್ಸವ

Suddi Udaya

ಉಜಿರೆ: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’: ಮೂರು ದಶಕಗಳ ವೃತ್ತಿ ಬದುಕಿಗೆ ಗೌರವದ ಬೀಳ್ಕೊಡುಗೆ

Suddi Udaya
error: Content is protected !!