ಮಂಗಳೂರು: ನಾವೆಲ್ಲ ಅಭಿಮಾನಿಗಳು ಅವರ ನೆಚ್ಚಿನ ತಾರೆಯರಿಗೆ ಟೆಂಪಲ್ ಕಟ್ಟೋದು, ಅವರ ಹೆಸರುಗಳನ್ನು ತಮ್ಮ ಮನೆಗಳಿಗೆ, ಅಂಗಡಿಗಳಿಗೆ ಇಡೋದು ಇಲ್ಲಾ ಮಕ್ಕಳಿಗೆ ಅವರದ್ದೇ ಹೆಸರಿಡೋದನ್ನು ನೋಡಿದ್ದೇವೆ.ಆದ್ರೆ ಇಲ್ಲೊಬ್ಬ ಕಂಬಳ ಅಭಿಮಾನಿ ತನ್ನ ಹೋಟೆಲ್ ಗೆ ಕಂಬಳ ಕೋಣದ ಹೆಸರಿಟ್ಟು ಅಭಿಮಾನ ವ್ಯಕ್ತಪಡಿಸಿದ್ದಾರೆ.
ಹೌದು ಕಂಬಳ ಲೋಕದ ಕಿಂಗ್ ಎಂದು ಗುರುತಿಸಿಕೊಂಡಿರುವ ಕೋಣ ತಾಟೆಗೆ ಕಂಬಳದ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ಗೆ ಅದರ ಹೆಸರನ್ನು ಇಡುವ ಮೂಲಕ ಗೌರವ ಅರ್ಪಿಸಿದ್ದಾರೆ. ಪಾಣೆ ಮಂಗಳೂರಿನಿಂದ 2 ಕಿಲೋಮೀಟರ್ ದೂರದ ಶಂಭೂರು ಗ್ರಾಮದಲ್ಲಿ ಊಟದ ಹೋಟೆಲ್‌ಗೆ ‘ಇರುವೈಲ್ ತಾಟೆ’ ಎಂದು ಹೆಸರಿಡಲಾಗಿದೆ.
ಕಂಬಳ ಅಭಿಮಾನಿಯಾಗಿರುವ ಜಯಂತ್ ಅಂಚನ್ ಅವರು ತಮ್ಮ ‘ಶಿವ ಶಕ್ತಿ’ ಫಾಸ್ಟ್ ಫುಡ್ ಕೇಂದ್ರವನ್ನು ಹೋಟೆಲ್ ಆಗಿ ಪರಿವರ್ತಿಸಿದ್ದು ಇದಕ್ಕೆ ಕಂಬಳಕ್ಕೆ ಸಂಬಂಧಿಸಿದ ಹೆಸರು ಇರಿಸಿದ್ದಾರೆ. ಜಯಂತ್ ಅಪ್ಪಟ ಕಂಬಳ ಅಭಿಮಾನಿಯಾಗಿದ್ದು, ಜಿಲ್ಲೆಯಲ್ಲಿ ಎಲ್ಲೇ ಕಂಬಳ ನಡೆದರೂ ಕೂಡ ಜಯಂತ್ ಅಲ್ಲಿರುತ್ತಾರೆ. ಹೀಗಿರುವಾಗ 8 ವರ್ಷಗಳ ಹಿಂದೆ ‘ತಾಟೆ’ ಅವರ ಕಣ್ಣಿಗೆ ಬಿದ್ದಿದೆ. ಅದರ ಓಟದ ಪರಿಗೆ ಫಿದಾ ಆದ ಅವರು ಕ್ರಮೇಣ ಅದರ ಅಭಿಮಾನಿಯಾದರು. ಈ ಪ್ರೀತಿ ಹೋಟೆಲ್ ಹೆಸರಿನ ರೂಪದಲ್ಲಿ ವ್ಯಕ್ತವಾಗಿದೆ
‘ತಾಟೆ ಅಪ್ರತಿಮ ಓಟಗಾರ, ಕಂಬಳದಲ್ಲಿ ಎರಡು ಕೋಣಗಳು ಜೊತೆಯಾಗಿ ಓಡುತ್ತವೆ. ಸಾಮಾನ್ಯವಾಗಿ ಅವೆರಡೂ ಜೊತೆಯಾಗಿ ಅಂತಿಮ ಗೆರೆಯತ್ತ ಧಾವಿಸುತ್ತವೆ. ಆದರೆ ತಾಟೆ ತನ್ನ ಜೊತೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತದೆ. ಹೀಗಾಗಿ ಅದರ ಫಿನಿಶಿಂಗ್ ನೋಡುವುದು ಕಣ್ಣಿಗೆ ಆನಂದ. ಅದರ ಓಟವನ್ನು ನೋಡುತ್ತ ನೋಡುತ್ತ ಅಭಿಮಾನಿಯಾದೆ. ಹೋಟೆಲ್‌ಗೆ ಆ ಕೋಣದ ಹೆಸರಿಡಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ.