ಬೆಳಾಲು:ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಇನ್ಫೋಮೆಟ್ ಫೌಂಡೇಶನ್ ಮಂಗಳೂರು ಇವರಿಂದ, ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಸಿದ್ಧತೆ ವಿಷಯದಲ್ಲಿ ತರಬೇತು ಕಾರ್ಯಾಗಾರ ಜರಗಿತು.
ತರಬೇತುದಾರರಾದ ಮಂಗಳೂರಿನ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು,ಆಪ್ತ ಸಲಹೆಗಾರರು ಆಗಿರುವ ಅಬ್ದುಲ್ ಖಾದರ್ ಮತ್ತು ಬೆಂಗಳೂರಿನ ಐಟಿ ಉದ್ಯೋಗಿ ಮಹಮ್ಮದ್ ತೌಸಿಫ್ ರವರು ತರಬೇತಿಯನ್ನು ನಡೆಸಿಕೊಟ್ಟರು.
ತರಬೇತುದಾರರಾದ ಮಹಮ್ಮದ್ ತೌಸಿಫ್ ಮಾತನಾಡಿ” ದುಡಿಮೆ ಯಶಸ್ಸಿನ ಮೂಲಮಂತ್ರ. ವಿದ್ಯಾರ್ಥಿಗಳು ಕನಸು ಕಾಣಬೇಕು, ನನಸಾಗುವಂತೆ ಯೋಜನಾಬದ್ಧವಾಗಿ ಪರಿಶ್ರಮಪಡಬೇಕು. ಜತೆಗೆ ಸಕಾರಾತ್ಮಕ ಮನೋಭಾವ, ಸ್ವೀಕಾರಶೀಲ ಸ್ವಭಾವ, ದುರಾಭ್ಯಾಸ ರಹಿತ ಜೀವನದ ಸಂಕಲ್ಪವಿರುವವರು ಯಶಸ್ವೀ ಸಾಧಕರಾಗಬಹುದು” ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗುರಿ ನಿರ್ಧಾರ, ಆತ್ಮವಿಶ್ವಾಸ, ಅಧ್ಯಯನ ತಂತ್ರಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಕಾರ್ಯದರ್ಶಿ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಸಂಚಾಲಕ ಉಮೇಶ್ ಮಂಜೊತ್ತು ವಂದಿಸಿದರು. ಹಿರಿಯ ಶಿಕ್ಷಕಿ ವಾರಿಜಾ ಎಸ್. ಗೌಡ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರು, ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.