ಬಳಂಜ: ತುಳುನಾಡಿನ ಧಾರ್ಮಿಕ ಅಚರಣೆಗಳೊಂದಾದ ಪುರ್ಸರ ರಾಶಿ ಪೂಜೆಯು ಬಳಂಜ ದೇವಸ್ಥಾನದ ಬಳಿ ಅದ್ದೂರಿಯಿಂದ ಮತ್ತು ಅರ್ಥಪೂರ್ಣವಾಗಿ ನಡೆಯಿತು.
ಬಳಂಜ ಜೋಗಿ ಪುರುಷ ಭಕ್ತವೃಂದದ ನೇತೃತ್ವದಲ್ಲಿ ಗ್ರಾಮದ ಮಕ್ಕಳು, ಯುವಕರು ಹಿರಿಯರು ಸುಗ್ಗಿ ಹುಣ್ಣಿಮೆಯ ಸಂಧರ್ಭದಲ್ಲಿ 5 ದಿನಗಳ ಕಾಲ ವಿವಿಧ ವೇಷಭೂಷಣಗಳನ್ನು ತೊಟ್ಟು ಗ್ರಾಮದ ಮನೆಮನೆಗೆ ಸಂಚರಿಸಿದ್ದರು. ಬಳಿಕ ತಾವು ಸಂಗ್ರಹಿಸಿದ ಕಾಣಿಕೆಯನ್ನು ಕದ್ರಿ ಮಂಜುನಾಥೇಶ್ವರನ ಸನ್ನಿಧಿಗೆ ಅರ್ಪಿಸಿದರು. ಏ.13 ರಂದು ರಾತ್ರಿ ಅದ್ದೂರಿಯಾಗಿ ಪುರುಷರ ರಾಶಿ ಪೂಜೆಯನ್ನು ನಡೆಸಿ ಈ ವರ್ಷದ ಪುರುಷ ಕಟ್ಟುವ ಆಚರಣೆಯನ್ನು ಮುಕ್ತಾಯಗೊಳಿಸಿದರು.
ರಾಶಿ ಪೂಜೆಯ ಹಿನ್ನೆಲೆ ಬಳಂಜದ ಜೋಗಿ ಪುರುಷ ಭಕ್ತವೃಂದದ ವತಿಯಿಂದ ಬಳಂಜ ಪಂಚಲಿಂಗೇಶ್ವರ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ದೇವಳದ ಆವರಣದಲ್ಲಿ ಕದ್ರಿ ಮಂಜುನಾಥೇಶ್ವರ ಸ್ವಾಮಿಯನ್ನು ಇಟ್ಟು ಅದರ ಎದುರು ಅವಲಕ್ಕಿಯ ದೊಡ್ಡ ರಾಶಿಯನ್ನು ಹಾಕಿ, ಪೂಜೆ ನಡೆಸಲಾಯಿತು.
ಇದೇ ವೇಳೆ ದೇವರ ಬಲಿ, ದೈವದ ದರ್ಶನ, ವಿವಿಧ ವೇಷಭೂಷಣಗಳ ಪ್ರದರ್ಶನ ನಡೆಯಿತು.
ಪೂಜೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಕ್ಕಳು – ಮಹಿಳೆಯರು ಭಾಗವಹಿಸಿದ್ದರು. ಎಲ್ಲರಿಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.