ಉಜಿರೆ: ಭಾರತ ದೇಶದಲ್ಲಿ ಸೆಮಿ ಕಂಡಕ್ಟರ್ ಸರ್ಕ್ಯೂಟ್ ನಿರ್ಮಾಣಕ್ಕೆ ವಿಶೇಷ ಒತ್ತು ನೀಡುತ್ತಿದೆ. ಚಿಪ್ ತಯಾರಿಕಾ ಫ್ಯಾಕ್ಟರಿಗಳಿಗೆ ಸೆಟ್ ಅಪ್ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಸಿಲಿಕಾನ್ ನಲ್ಲಿ ಫ್ಯಾಬ್ರಿಕೇಟ್ ಮಾಡಲು ಬೇಕಾದ ಹಾಗೆ ತಂತ್ರಜ್ಞಾನ ಬೆಳವಣಿಗೆಯಾಗಿದೆ. ವೈಯಕ್ತಿಕ ಬೆಳವಣಿಗೆಗೂ ಇಂತಹ ಅವಕಾಶ ಕಲ್ಪಿಸುತ್ತಿರುವುದು ಸೂಕ್ತವಾಗಿದೆ. ಯೋಚನೆಯಿದ್ದರೆ ಯುವಕರ ಕ್ರಿಯಾಶೀಲತೆಗೆ ಸಾಕಷ್ಟು ಅವಕಾಶಗಳಿವೆ. ಶಿಸ್ತು, ಪ್ರಾಮಾಣಿಕತೆಯಿದ್ದರೆ ಉತ್ತಮ ಕಾರ್ಯಕ್ರಮ ಮೂಡಿ ಬರುತ್ತದೆ ಎಂದು ಬೆಂಗಳೂರಿನ ಬಿ.ಎಂ. ಆರ್. ಕಂಪನಿಯ ಸಾಫ್ಟ್ ವೆರ್ ಇಂಜಿನಿಯರ್ ನಿಖಿಲ್ ಮೂಡಬಿದ್ರಿ ನುಡಿದರು.
ಅವರು ಎ.20 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪೊಲಿಟೆಕ್ನಿಕ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ “ಸರ್ಕ್ಯೂಟ್ ಎಕ್ಸ್ಪೋ 2ಕೆ 23 ” ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಎಸ್ .ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ.ವೈ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಮತ್ತು ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆಯವರ ಪೂರ್ಣ ಸಹಕಾರದಿಂದ ಇಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಹೊಸ ಹೊಸ ಆವಿಷ್ಕಾರಗಳು, ಸಂಶೋಧನೆಗಳ ಮೂಲಕ ಸಮಾಜಕ್ಕೆ,ದೇಶಕ್ಕೆ ಉಪಯುಕ್ತವಾಗಿರುವುದನ್ನು ಬೇರೆ ದೇಶಗಳನ್ನು ಅವಲಂಬಿಸದೆ ನಮ್ಮ ದೇಶದಲ್ಲೇ ಸಿದ್ಧಪಡಿಸಲು ಸಾಧ್ಯವಿದೆ. ನಮ್ಮ ವಿಜ್ಞಾನಿಗಳ ಶಕ್ತಿ,ಪರಿಶ್ರಮ ,ಯೋಚನಾಲಹರಿಯಿಂದ ಏನನ್ನೂ ಸಾಧಿಸಬಹುದು. ಅವಕಾಶಗಳಿದ್ದರೆ ಬುದ್ಧಿವಂತಿಕೆ,ಸಾಧನೆಗೆ ಮಿತಿಯಿಲ್ಲ. ನಾವು ಸ್ವಾವಲಂಬನೆಯ ಸ್ಥಿತಿಗೆ ಬರಬೇಕು ಎಂದು ನುಡಿದರು.
ಎಸ್ .ಡಿ.ಎಂ. ಪೊಲಿಟೆಕ್ನಿಕ್ ಪ್ರಿನ್ಸಿಪಾಲ್ ಸಂತೋಷ್, ವಿಭಾಗ ಮುಖ್ಯಸ್ಥೆ ಮೇರಿ ಸ್ಮಿತಾ, ಮ್ಯಾನೇಜರ್ ಚಂದ್ರನಾಥ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ 3೦ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಗಿದ್ದು ಅದಕ್ಕೆ ಹರೀಶ್ ಎಂ.ವೈ ಚಾಲನೆ ನೀಡಿದರು. ವಿದ್ಯಾರ್ಥಿಗಳಾದ ಶ್ರೀಧ್ಯಾನ್ ಸ್ವಾಗತಿಸಿ,ಭೂಮಿಕಾ ಡಿ. ಆರ್ ಪ್ರಸ್ತಾವಿಸಿ,ಸ್ನೇಹ ವಂದಿಸಿದರು.