ಗುರುವಾಯನಕೆರೆ ಶಾಲಾ ಬಳಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ: ಪೊಲೀಸರ ದಾಳಿ: ತಪ್ಪಿಸಿಕೊಳ್ಳಲು ಯತ್ನಿಸಿ ಓಡುತ್ತಿದ್ದ ಓರ್ವ ರಸ್ತೆಗೆ ಬಿದ್ದು ಗಾಯ: ಇಬ್ಬರು ಆರೋಪಿಗಳ ಬಂಧನ

Suddi Udaya

ಗುರುವಾಯನಕೆರೆಯ ಸರಕಾರಿ ಪ್ರೌಢ ಶಾಲಾ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಇಬ್ಬರು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಪಡೆದುಕೊಂಡ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಹರೀಶ್ ಎಮ್. ಆರ್ ರವರು ಸಿಬ್ಬಂದಿಗಳ ಜೊತೆ ವಿಧಾನ ಸಭಾ ಚುನಾವಣಾ ಕರ್ತವ್ಯದ ಎಫ್. ಟಿ. ಎಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಬರಮಾಡಿಕೊಂಡು ಅವರನ್ನು ಇಲಾಖಾ ಜೀಪಿನಲ್ಲಿ ಕುಳ್ಳಿರಿಸಿಕೊಂಡು ಸ್ಥಳಕ್ಕೆ ದಾಳಿ ನಡೆಸಿದಾಗ, ಇಬ್ಬರು ವ್ಯಕ್ತಿಗಳು ಪೊಲೀಸ್ ಜೀಪನ್ನು ಕಂಡು ಕೈಯಲ್ಲಿದ್ದ ಪ್ಲಾಸ್ಟಿಕ್ ಜಿಪ್ ಕವರಿನ ಕಟ್ಟನ್ನು ಸ್ಥಳದಲ್ಲೇ ಎಸೆದು ಪರಾರಿಯಾದರೆನ್ನಲಾಗಿದೆ.

ಆರೋಪಿಗಳನ್ನು ಹಿಡಿಯಲು ಪೊಲೀಸರು ಬೆನ್ನಟ್ಟಿದಾಗ ಮಹಮ್ಮದ್ ಖೈಸ್ ಓಡುವ ಯತ್ನದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಜಾರಿ ಬಿದ್ದು ತಲೆಗೆ ಗಾಯಗೊಂಡನೆನ್ನಲಾಗಿದೆ. ಆತನನ್ನು ಹಿಡಿದು ವಿಚಾರಿಸಿ, ಸ್ಥಳದಲ್ಲಿ ಬಿಸಾಡಿದ ಪ್ಲಾಸ್ಟಿಕ್ ಜಿಪ್ ಕವರಲ್ಲಿದ್ದ ವಸ್ತುವನ್ನು ತೆರೆದು ನೋಡಲಾಗಿ ಅದರಲ್ಲಿ ಗಾಂಜಾದ ಹೂ, ಮೊಗ್ಗುಗಳು, ಬೀಜಗಳು ಇರುವುದು ಪತ್ತೆಯಾಯಿತು. ಸುಮಾರು ರೂ. 10 ಸಾವಿರ ಮೌಲ್ಯದ 294 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮೊಹಮ್ಮದ್ ಅಶ್ರಫ್‌ನನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಮಹಮ್ಮದ್ ಖೈಸ್‌ನನ್ನು ಸಿಬ್ಬದಿ ಭದ್ರಿಕೆಯಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 34/2023 ಕಲಂ; 8(ಸಿ),20 (ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

Leave a Comment

error: Content is protected !!