ಬೆಳ್ತಂಗಡಿ: ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಹಲ್ಲೆ, ಸರಕಾರಿ ಸೊತ್ತು ನಾಶ, ನಗದು ದರೋಡೆ ಹಾಗೂ ಜೀವ ಬೆದರಿಕೆಯೊಡ್ಡಿದ ಆರೋಪ ಪ್ರಕರಣದಲ್ಲಿ ಪಿಡಿಒ ನೀಡಿರುವ ದೂರಿನಂತೆ ಮೂರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಕ್ಕಾರು ಗ್ರಾ.ಪಂ ಸ್ವಚ್ಚತಾಗಾರ್ತಿ ಪ್ರಮೀಳಾ ಮತ್ತು ಪಿಡಿಒ ಸುಮಯ್ಯಾ ಅವರು ನೀಡಿದ ದೂರಿನಂತೆ ಗ್ರಾ.ಪಂ ಸದಸ್ಯೆ ಯಮುನಾ, ಅವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ದೂರಿನ ಸಾರಾಂಶವೇನೆಂದರೆ, ಗ್ರಾ.ಪಂ ವಿವಾದಿತ ಕಟ್ಟಡದಲ್ಲಿ ಯಮುನಾ ಅವರು ನೆಲೆಸಿರುವ ಬಗ್ಗೆ ಈಗಾಗಲೇ ವ್ಯಾಜ್ಯ ಇದೆ. ಈ ಕಟ್ಟಡದಲ್ಲಿ ಶಾಸಕರು ಎರಡನೇ ಬಾರಿಗೆ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಿದ್ದು, ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ ವತಿಯಿಂದ ಸಿಬ್ಬಂದಿ ಪ್ರಮೀಳಾ ಅವರು ಯಮುನಾ ಅವರಿಗೆ ನೋಟೀಸು ಜಾರಿಗೊಳಿಸಿ ಸ್ವೀಕೃತಿ ಪಡೆದು ಪಂಚಾಯತ್ ಗೆ ಮರಳಿದ್ದರು. ಇದಾದ ಸ್ವಲ್ಪದರಲ್ಲೇ ಯಮುನಾ ಮತ್ತು ಅವರ ಪುತ್ರ ನವೀನ್ ನಾಯ್ಕ ಅವರು ಪಂಚಾಯತ್ ಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಗಲಾಟೆ ಮಾಡಿ,. ಸಿಬ್ಬಂದಿ ಮೇಲೆ ಮತ್ತು,ಪಿಡಿಒ ಮೇಲೂ ಹಲ್ಲೆ ನಡೆಸಿದರೆಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. . ಅಲ್ಲದೆ ಗ್ರಾ.ಪಂ ಸರಕಾರಿ ಸೊತ್ತಾಗಿರುವ ಮೊಬೈಲ್ ಫೋನ್ ಅನ್ನು ಪಿಡಿಒ ಅವರಿಂದ ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿ ಹಾನಿ ಮಾಡಿರುತ್ತಾರೆ. ಪಂಚಾಯತ್ ನಲ್ಲಿದ್ದ ಸರಕಾರಿ ಹಣ ರೂ.3 ಸಾವಿರ ತೆಗೆದು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಂಚಾಯತ್ ಎಡೆಂಡರ್ ಅವರ ಹುದ್ದೆ ಖಾಲಿ ಇರೂದರಿಂದ ಪಿಡಿಒ ನಿರ್ದೇಶನದ ಮೇರೆಗೆ ಸ್ವಚ್ಚತಾಗಾರ್ತಿ ಪ್ರಮೀಳಾ ನೋಟೀಸು ನೀಡುವ ಕರ್ತವ್ಯ ಮಾಡಿ ಬಂದಿದ್ದರು. ಅವರ ಮೇಲೆ ಆಗಿರುವ ಹಲ್ಲೆ, ಜೀವ ಬೆದರಿಕೆ ಬಗ್ಗೆ ಪಿಡಿಒ ಅವರಿಗೆ ಅವರು ಸಲ್ಲಿಸಿರುವ ದೂರಿನ ಉಲ್ಲೇಖದಂತೆ ಪಂಚಾಯತ್ ಕಚೇರಿಯಲ್ಲಿ ನಡೆದಿರುವ ಅಪರಾಧ ಕೃತ್ಯದ ಬಗ್ಗೆ ಪಿಡಿಒ ಸುಮಯ್ಯಾ ಅವರು ಠಾಣೆಗೆ ದೂರು ದಾಖಲಿಸಿದ್ದಾರೆ. ಅದರಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 109, 504, 323, 506, 354, 353, 392, 34, 2(A) ಮೊದಲಾದ ದಂಡ ಸಂಹಿತೆಯಂತೆ ಕೇಸು ದಾಖಲಾಗಿದೆ.