ಉಜಿರೆ, ಜೂ.9: ಮಾನವತೆಯ ಸೇವೆ ಮಾಡುವುದು ಮಾನವ ಬದುಕಿನ ಅತ್ಯುತ್ತಮ ಕಾರ್ಯವಾಗಿದ್ದು, ಅದನ್ನು ಧ್ಯೇಯವಾಗಿರಿಸಿಕೊಂಡಿರುವ ಸ್ಕೌಟ್ಸ್ ಗೈಡ್ಸ್ ನ ಕಾರ್ಯ ಸ್ತುತ್ಯರ್ಹ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ (ಸ್ಕೌಟ್ಸ್ & ಗೈಡ್ಸ್ ಹಿರಿಯ ವಿಭಾಗ) ಘಟಕವು ಇಂದು (ಜೂ.9) ಆಯೋಜಿಸಿದ್ದ ಒಂದು ದಿನದ ‘ರೋವರ್ಸ್ & ರೇಂಜರ್ಸ್ ಸಂಬಂಧಿತ ವಸ್ತುಪ್ರದರ್ಶನ’ ಹಾಗೂ ‘ಅಂತರ್ ತರಗತಿ ಸ್ಪರ್ಧೆ’ಗಳ ಉದ್ಘಾಟನ ಸಮಾರಂಭ ‘ಪ್ರಮುಕ 23’ ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯರಿಗೆ ಸಹಾಯ ಮಾಡಿದವರನ್ನು ಇತಿಹಾಸ ಸ್ಮರಿಸುತ್ತದೆ. ಗಾಂಧೀಜಿ, ವಿವೇಕಾನಂದರಂತಹ ಮಹಾತ್ಮರ ತ್ಯಾಗ, ಸಮರ್ಪಣೆ, ಸಂಯಮ, ಸರಳತೆ ಹಾಗೂ ಅವರು ಮಾನವತೆಗೆ ಮಾಡಿದ ಕಾರ್ಯಗಳನ್ನು ಚರಿತ್ರೆ ಸ್ಮರಿಸುತ್ತದೆ. ಮಾನವತೆಗೆ ಸಹಾಯ ಮಾಡುವುದು ಶ್ರೇಷ್ಠ ಕಾರ್ಯವಾಗಿದ್ದು, ಅದನ್ನು ಸ್ಕೌಟಿಂಗ್ ಮಾಡುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತ (ಎಎಸ್ಒಸಿ) ಭರತ್ ರಾಜ್ ಕೆ. ಅವರು, “3 ವರ್ಷದ ಮಗುವಿನಿಂದ ಹಿಡಿದು ಯುವಕರವರೆಗೆ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ವ್ಯಕ್ತಿತ್ವಗಳನ್ನು ಬೆಳೆಸುತ್ತದೆ. ಜಿಲ್ಲೆಯಲ್ಲಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಎಸ್.ಡಿ.ಎಂ. ಕಾಲೇಜಿನ ಘಟಕವು ಸಂಸ್ಥೆಯ ಚಟುವಟಿಕೆಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ತೊಡಗಿಕೊಳ್ಳುತ್ತಿದೆ” ಎಂದರು.
ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕದ ರೇಂಜರ್ ಲೀಡರ್ ಆಗಿ ಕರ್ತವ್ಯ ನಿರ್ವಹಿಸಿದ್ದ (ನಿಕಟಪೂರ್ವ) ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ರೋವರ್ ಹಾಗೂ ರೇಂಜರ್ ಗಳಿಗೆ ಕಾಲೇಜಿನ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು.
ಸ್ಕೌಟಿಂಗ್ ಕೌಶಲಗಳಿಗೆ ಸಂಬಂಧಿಸಿದಂತೆ ಆಯೋಜಿಸಲಾದ ವಸ್ತುಪ್ರದರ್ಶನ ಉದ್ಘಾಟನೆಗೊಂಡಿತು. ಸ್ಕೌಟಿಂಗ್ ನಲ್ಲಿ ಬಳಸುವ ಫ್ಲ್ಯಾಗ್ ಫಾರ್ಮೇಶನ್, ಸಿಗ್ನಲಿಂಗ್, ಶಿಬಿರ, ವಸ್ತುಗಳ ಎತ್ತರ- ಅಳತೆ ಅಂದಾಜು, ಸಾಹಸಮಯ ಚಟುವಟಿಕೆಗಳು ಇತ್ಯಾದಿಗಳ ಪ್ರತಿಕೃತಿಗಳು, ಮಂಗಳೂರಿನ ಸ್ಕೌಟ್ಸ್& ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಪ್ರತಿಕೃತಿ, ವಿವಿಧ ಬಗೆಯ ಬ್ಯಾಜ್ ಹಾಗೂ ಸ್ಕಾರ್ಫ್, ಗಂಟುಗಳು (ನಾಟ್ಸ್), ಸಮವಸ್ತ್ರಗಳನ್ನು ಪ್ರದರ್ಶಿಸಲಾಗಿತ್ತು.
ಕಾಲೇಜಿನ ವಿದ್ಯಾರ್ಥಿಗಳಿಗೆ 6 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ರೋವರ್ಸ್ & ರೇಂಜರ್ಸ್ ಘಟಕದ ರೋವರ್ ಸ್ಕೌಟ್ ಲೀಡರ್ (RSL) ಪ್ರಸಾದ್ ಕುಮಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ರೇಂಜರ್ ಲೀಡರ್ (RL) ಗಾನವಿ ವಂದಿಸಿದರು. ರೇಂಜರ್ ಗಳಾದ ರಕ್ಷಾ ಮತ್ತು ತಂಡದವರು ಪ್ರಾರ್ಥಿಸಿ, ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.