ಮಡಂತ್ಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯಕ್ಕೆ ಸಂಬಂಧಪಟ್ಟ ಭಜನಾ ಮಂಡಳಿಗಳ ಸಭೆಯನ್ನು ಇತ್ತೀಚೆಗೆ ಮಡಂತ್ಯಾರು ಯೋಜನಾ ಕಚೇರಿಯಲ್ಲಿ ನಡೆಸಲಾಯಿತು. ಸೇವಾಪ್ರತಿನಿಧಿಯಾಗಿರುವ ಶ್ರೀಮತಿ ಹರಿಣಿ ಇವರ ಸ್ವಾಗತದೊಂದಿಗೆ ಸಭೆಯು ನಡೆಯಿತು.
ಯೋಜನಾ ಮೇಲ್ವಿಚಾರಕ ವಸಂತ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಇವರು ಭಜನಾ ಮಂಡಳಿಗಳ ಸರಕಾರದ ನಿಯಮಾನುಸಾರ ನೊಂದಾವಣಿಯ ಬಗ್ಗೆ ಭಜನಾ ಮಂಡಳಿಗಳ ಜಾಗದ ರೆಕಾರ್ಡಿನ ಬಗ್ಗೆ ಹಾಗೂ ಮಂಡಳಿಗಳಿಗೆ ಈಗ ಇರುವ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆ ಮತ್ತು ಅಂತಹ ಸಮಸ್ಯೆಗಳಿಗೆ ಹುಡುಕಿಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು.
ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಅದನ್ನು ಬಲವರ್ಧನೆಗೊಳಿಸಲು ನಮ್ಮ ಭಜಕ ಸಹೋದರರೊಂದಿಗೆ ಸಹೋದರಿಯರು ಮತ್ತು ಮಾತೆಯರು ಕೈಜೋಡಿಸಬೇಕು ಹಾಗೂ ನಮ್ಮ ಮಕ್ಕಳಿಗೆ ಧರ್ಮ ಜಾಗೃತಿಯೊಂದಿಗೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ಮನೆಯಲ್ಲಿ ಹೇಳಿಕೊಡಬೇಕು ಎಂದರು. ನಂತರ ಭಜನಾ ತಂಡಗಳ ಪದಾಧಿಕಾರಿಗಳು ಆಯಾ ತಂಡದ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸೇವಾ ಪ್ರತಿನಿಧಿಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಸಭೆಯಲ್ಲಿ ಮಡಂತ್ಯಾರು ವಲಯ ಸಂಯೋಜಕರಾದ ಪ್ರವೀಣ್ ಹೆಗ್ಡೆ ಮಡಂತ್ಯಾರು ಹಾಗೂ ಪಣಕಜೆ, ಸೊಣಂದೂರು, ಪಾರೆಂಕಿ, ಪುರಿಯ ಮತ್ತು ಮಂಜಲಪಲ್ಕೆ ಭಜನಾ ತಂಡಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.