ಬೆಳ್ತಂಗಡಿ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳ ಶಿಕ್ಷಣ ಸಿಗುವಂತಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ವಿದ್ಯಾವರ್ಧಕ ಸಂಘ ಕೆಲಸ ಮಾಡುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ಜೂ. 23 ರಂದು 1920-23ನೇ ಶೈಕ್ಷಣಿಕ ಸಾಲಿನ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸನಾತನ ಸಂಸೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವು ಮಾಡಬೇಕೇ ಹೊರತು ಅನ್ಯರಿಂದ ಅಪೇಕ್ಷಿಸಲು ಸಾಧ್ಯವಿಲ್ಲ. ಸನಾತನತೆಯನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಬೇಕು. ಆಧುನಿಕತೆಯ ಭರದಲ್ಲಿ ಎಲ್ಲಾ ಕಡೆ ಆಂಗ್ಲ ಮಾಧ್ಯಮ ಶಾಲೆಗಳು ಪ್ರಾರಂಭವಾಗಿವೆ. ಅವೆಲ್ಲದರ ಮಧ್ಯೆ ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತಾಗಬೇಕು ಎಂಬ ಉದ್ದೇಶ ನಮ್ಮದು ಎಂದರು.
ಮಾತೃಭಾಷೆಯಲ್ಲಿ ಶಿಕ್ಷಣ ನೀಡುವಂತಹ ಶಾಲೆಗಳು ಬೆಳೆದಲ್ಲಿ ಊರಿಗೂ ಹೆಮ್ಮೆ. ಅದಕ್ಕಾಗಿ ಜನತೆ ಕೈಜೋಡಿಸಬೇಕು ಎಂದು ಭಟ್ ಅಪೇಕ್ಷಿಸಿದರು.
ಕಾರ್ಯಕ್ರಮದಲ್ಲಿ ಪಡ್ಯಾರಬೆಟ್ಟು ಧರ್ಮದರ್ಶಿ ಜೀವಂಧರ ಕುಮಾರ್ ಜೈನ್, ಕಲ್ಲೇರಿ ಕುಕ್ಕಿನಂತಾಯ ಉಮಲತ್ತಡೆ ಧರ್ಮದರಸು ಬ್ರಹ್ಮಬೈದರ್ಕಳ ಗರಡಿ ಅಳಿಯೂರು ಇದರ ಅಧ್ಯಕ್ಷ ಪ್ರವೀಣ ಭಟ್ ಕಾನಂಗಿ, ನೆಲ್ಲಿಕಾರು ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಶಾಲಾ ಅಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು.
ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಭಾರತ ಮಾತೆಯ, ಶಾರದಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹೋಮಕುಂಡಕ್ಕೆ ಘೃತ ಸಮರ್ಪಿಸಿದರು.
ಶಾಲಾ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಪ್ರಸ್ತಾವಿಸಿ ಸ್ವಾಗತಿಸಿದರು. ಕವಿತಾ ಮಾತಾಜಿ ವಂದಿಸಿದರು. ಶಿಕ್ಷಕ ಸತೀಶ್ ಕುಮಾರ್ ಎನ್. ಕಾರ್ಯಕ್ರಮ ನಿರ್ವಹಿಸಿದರು.