ನೆರಿಯದಲ್ಲಿ ಹಿಂದೂ ರುದ್ರಭೂಮಿಗಾಗಿ ಗ್ರಾಮಸ್ಥರ ಪ್ರತಿಭಟನೆ: ಮೃತದೇಹವನ್ನು ಪಂಚಾಯತ್ ಎದುರಿನಲ್ಲಿಟ್ಟು ಪ್ರತಿಭಟನೆಗೆ ಸಿದ್ದತೆ: ಸ್ಥಳಕ್ಕೆ ತಹಶೀಲ್ದಾರರು ಬರಬೇಕು,ಇಂದೇ ಹಿಂದೂ ರುದ್ರಭೂಮಿಗೆ ಸ್ಥಳ ಮಂಜೂರುಗೊಳಿಸಬೇಕೆಂದು ಒತ್ತಾಯ

Suddi Udaya

ನೆರಿಯ: ತಾಲೂಕಿನ ನೆರಿಯ ಗ್ರಾಮದಲ್ಲಿ ಹಿಂದೂ ರುದ್ರಭೂಮಿ ಇಲ್ಲದಿರುವುದರಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತಿದ್ದು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಮೃತ ದೇಹವನ್ನು ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹಿಂದೂ ರುದ್ರಭೂಮಿ ಸ್ಥಳ ಮಂಜೂರುಗೊಳಿಸುವಂತೆ ಹಲವಾರು ಗ್ರಾಮ ಸಭೆಗಳಲ್ಲಿ ಬೇಡಿಕೆ ಇಟ್ಟರೂ ಈವರೆಗೆ ಗ್ರಾಮಸ್ಥರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ನೆರಿಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜು 14 ರಂದು ಜನತಾ ಕಾಲನಿ ನಿವಾಸಿಯೊಬ್ಬರು ಮೃತಪಟ್ಟಿದ್ದು ಅವರ ಮೃತ ದೇಹವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟನೆಗೆ ಊರವರು ಮುಂದಾಗಿದ್ದಾರೆ. ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ನೆರಿಯ ಗ್ರಾಮ ಪಂಚಾಯತ್ ಎದುರೇ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

ಮೃತರ ಮನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳು ಬಂದು ಗ್ರಾಮಸ್ಥರ ಮನವೊಲಿಸಿದರೂ ಇಷ್ಟು ವರ್ಷ ಬೇಡಿಕೆ ಈಡೇರಿಲ್ಲ ಹಿಂದೂ ರುದ್ರಭೂಮಿ ಆಗುವ ತನಕ ಪಂಚಾಯತ್ ಗೆ ಬೀಗ ಹಾಕಿ ಎಂದು ತರಾಟೆಗೆ ತಗೊಂಡಿದ್ದಾರೆ.

ಬೆಳ್ತಂಗಡಿ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಇಂದೇ ಹಿಂದು ರುದ್ರಭೂಮಿಗೆ ಸ್ಥಳ ನಿಗದಿಪಡಿಸಬೇಕು. ಒಂದು ವೇಳೆ ಇವತ್ತೂ ಕೂಡ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಪಂಚಾಯತ್ ಎದುರು ಅಂತ್ಯ ಸಂಸ್ಕಾರವನ್ನು ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

Leave a Comment

error: Content is protected !!