ನಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮವು ಜು. 20 ರಂದು ನಡೆಯಿತು.
50 ವಿವಿಧ ಬಗೆಯ ಹಣ್ಣುಗಳ ಗಿಡಗಳನ್ನು ನೆಡುವುದರ ಮೂಲಕ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಲಾಯಿಲ ವಲಯ ಮೇಲ್ವಿಚಾರಕರಾದ ಸುಶಾಂತ್ ಹಾಗೂ ಶ್ರೀಮತಿ ಶಶಿಕಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು.
ನಡ ಗ್ರಾಮದ ಗ್ರಾಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ರಝಾಕ್ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳ್ತಂಗಡಿ ತಾಲ್ಲೂಕಿನ ಗ್ರಾಮಾಭಿವೃದ್ಧಿಯ ಕೃಷಿ ಅಧಿಕಾರಿ ಶ್ರೀರಾಮ್ ಕುಮಾರ್ ಮಾತನಾಡಿ ಅಂತರ್ಜಲ ಬತ್ತಿಹೋಗುತ್ತಿರುವ ಬಗ್ಗೆ ನಾವೆಲ್ಲಾ ಎಚ್ಚರಗೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು. ಪ್ರತಿ ವಿದ್ಯಾರ್ಥಿ ತನ್ನ ಜನ್ಮದಿನವನ್ನು ಗಿಡ ನೆಡುವ ಮೂಲಕ ಆಚರಿಸುವಂತೆ ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಅಕ್ಷರ ಕೈತೋಟಕ್ಕೆ ವಿವಿಧ ತರಕಾರಿ ಬೀಜಗಳ ಬಿತ್ತನೆಯನ್ನು ಮಾಡಲಾಯಿತು. ಪರಿಸರಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶ್ರೀ ಸುಧಾಕರ, ಸದಸ್ಯರಾದ ಶ್ರೀ ಧರ್ಣೇಂದ್ರ ಜೈನ್, ಮುಖ್ಯ ಶಿಕ್ಷಕ ಶ್ರೀ ಯಾಕೂಬ್ ಎಸ್ , ಗ್ರಾಮಾಭಿವೃದ್ಧಿ ನಡ ಒಕ್ಕೂಟದ ಸದಸ್ಯರುಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ನಡ ಗ್ರಾಮದ ಸೇವಾ ನಿರ್ವಹಕಿ ಶ್ರೀಮತಿ ಶಕುಂತಳಾ ಇವರು ನಿರ್ವಹಿಸಿದ್ದರು.