ಯುದ್ಧಭೂಮಿಯಲ್ಲಿ ಭಾರತಾಂಬೆಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಧೀರರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಒಬ್ಬೊಬ್ಬ ವೀರನ ಒಂದೊಂದು ಕಥೆಯು ರೋಚಕ,ಮೈನವೀರೇಳಿಸುವಂತದ್ದು. ತಮ್ಮ ವೈಯಕ್ತಿಕ ಬದುಕಿನ ಸುಖಗಳನ್ನೆಲ್ಲಾ ತೊರೆದು ದೇಶಕ್ಕಾಗಿ ಮುಡಿಪಾಗಿಡುವ ಬದುಕು ಸೈನಿಕನದ್ದು. ಸೈನ್ಯದಲ್ಲಿ ಜೊತೆಗಿದ್ದವರು ನಮ್ಮ ಕೈಯಲ್ಲೇ,ಎದುರಲ್ಲೇ ಪ್ರಾಣ ತ್ಯಾಗ ಮಾಡಿರುವ ದೃಶ್ಯಗಳು ಇನ್ನೂ ಮಾಸದಂತಿದೆ. ದೇಶ ಸೇವೆಯೇ ಭಗವಂತನ ಸೇವೆಯೆಂದು ಪ್ರಾಮಾಣಿಕವಾಗಿ ಸೇವೆ ಮಾಡಿದ ತೃಪ್ತಿ ನಮಗಿದೆ. ನಮ್ಮ ಉಸಿರಿರುವವರೆಗೆ ಬೇರೆ ಬೇರೆ ರೂಪದಲ್ಲಿ ದೇಶಕ್ಕಾಗಿ ಸೇವೆ ಮಾಡೋ ಅವಕಾಶವಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮಾಜಿ ಸೈನಿಕ ಕಾಂಚೋಡು ಗೋಪಾಲಕೃಷ್ಣ ಭಟ್ ಹೇಳಿದರು.
ಕಾಲೇಜಿನಲ್ಲಿ ನಡೆದ ‘ಕಾರ್ಗಿಲ್ ವಿಜಯ ದಿವಸ’ ಆಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ ತಾವು ಸೈನಿಕನಾಗಿದ್ದಾಗ ಮೆರೆದ ಸಾಹಸವನ್ನು ಎಳೆ ಎಳೆಯಾಗಿ ಬಿಚ್ಚಿ ವಿದ್ಯಾರ್ಥಿಗಳಿಗೆ ವಿವರಿಸಿದರು.’ಜೈ ಜವಾನ್ ಜೈ ಕಿಸಾನ್ ನನ್ನ ಮೂಲ ಮಂತ್ರವಾಗಿದೆ ನಿವೃತ್ತಿ ಬಳಿಕ ಕೃಷಿಕನಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಾಲೇಜಿನ ದೈಹಿಕ ಶಿಕ್ಷಕ ಹಾಗೂ ಮಾಜಿ ಸೈನಿಕ ಲಕ್ಷ್ಮಣ್ ಜಿ.ಡಿಯವರು ಕಾರ್ಗಿಲ್ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ಕಾರ್ಗಿಲ್ ಕದನ ಸಮಯ ಅಲ್ಲೇ ಇದ್ದ ತಮ್ಮ ಅನುಭವ ಹಂಚಿಕೊಂಡರು.
ಇನ್ನೊರ್ವ ಅತಿಥಿಯಾಗಿದ್ದ ಕಾಲೇಜಿನ ನಿಲಯ ಪಾಲಕರು ಹಾಗೂ ಮಾಜಿ ಸೈನಿಕರಾದ ವಿಶ್ವನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಅನ್ನ ಕೊಟ್ಟ ರೈತ ದೇಶಕ್ಕೆ ದುಡಿವ ಯೋಧನನ್ನು ಯಾವತ್ತೂ ಮರೆಯಬಾರದು, ತಮ್ಮ ಮನೋಬಲವನ್ನು ಗೆದ್ದು ಹೋರಾಡುವ ಸೈನಿಕ ಯಾವತ್ತೂ ನಮಗೆ ಮಾದರಿ ಎಂದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಮನೀಷ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜು ವತಿಯಿಂದ ವೇದಿಕೆಯಲ್ಲಿದ್ದ ಮಾಜಿ ಸೈನಿಕರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ದೇಶಕ್ಕಾಗಿ ಹೋರಾಡಿ ಮಡಿದ ಸೈನಿಕರಿಗೆ ಮೌನ ಪ್ರಾರ್ಥನೆ ಮಾಡಿ ಗೌರವ ಸೂಚಿಸಲಾಯಿತು.
ಸಂಸ್ಕೃತ ಉಪನ್ಯಾಸಕರಾದ ಮಹೇಶ್ಎಸ್.ಎಸ್ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಹರ್ಷಿತ್ ವಂದಿಸಿದರು.