ಬೆಳ್ತಂಗಡಿ: ಕು| ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳ ಪತ್ತೆಗಾಗಿ ಇಂದು ಬೃಹತ್ ಪ್ರತಿಭಟನೆ ಹಾಗೂ ಹಕ್ಕೋತ್ತಾಯವನ್ನು ಮಾಡಲಾಗುತ್ತಿದ್ದು, ಸೌಜನ್ಯರ ಕೊಲೆ ಆರೋಪಿಗಳಿಗೆ ಯಾವುದೇ ರಾಜಕಾರಣಿ ಹಾಗೂ ವ್ಯಕ್ತಿಗಳು ಸಹಕಾರ ನೀಡಿದರೆ, ಅಂತಹ ವ್ಯಕ್ತಿಗಳು ನಮ್ಮ ಕಣ್ಣ ಮುಂದೆಯೇ ಹುಚ್ಚರಂತೆ ತಿರುಗಾಡುವ ಪರಿಸ್ಥಿತಿಯನ್ನು ಕ್ಷೇತ್ರದ ಮಂಜುನಾಥ ಸ್ವಾಮಿ ಮಾಡಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ಇದರ ವತಿಯಿಂದ ಉಜಿರೆಯಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗೂ ಹಕ್ಕೋತ್ತಾಯ ಜಾಥಾದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು. ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಮಾಡಿದ ಆದೇಶದ ನಂತರ ಬಾಲಕಿಗೆ ನ್ಯಾಯಸಿಗಬೇಕು, ನೈಜ ಆರೋಪಿಗಳ ಪತ್ತೆಯಾಗಬೇಕು ಎಂದು ಒತ್ತಾಯಿಸಿ ನಾನು ಪ್ರತಾಪಸಿಂಹ ನಾಯಕ್ ಜೊತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ನೀವು ಕೊಟ್ಟ ಮನವಿಯನ್ನು ಕೂಡಾ ಮುಖ್ಯ ಮಂತ್ರಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸೌಜನ್ಯ ಕೊಲೆ ಪ್ರಕರಣದಲ್ಲಿ ತೀರ್ಪು ಬರುವಾಗ 11ವರ್ಷ ವಿಳಂಬವಾಗಿದೆ. ಆದರೆ ರಾಜ್ಯ ಸರಕಾರ ತನಿಖೆ ನಡೆಸಿ ಒಂದೆರಡು ತಿಂಗಳಲ್ಲಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಸಮಾಜದ ಮುಂದೆ ನಿಲ್ಲಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು. ಕೆಲವು ಎಡಬಿಡಂಗಿಗಳು ಪ್ರಕರಣವನ್ನು ದಾರಿತಪ್ಪಿಸುವ ಪ್ರಯತ್ನ ನಡೆಸುತ್ತಿದ್ದು, ಹಿಂದೂ ಸಮಾಜದ ಶಕ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಾಗೂ ಖಾವಂದರೆ ಬಗ್ಗೆ ಕೆಲ ವ್ಯಕ್ತಿಗಳು ಅಪಪ್ರಚಾರ ಮಾಡುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ, ಖಾವಂದರಿಗೆ ನಾವಿದ್ದೇವೆ ಎಂದು ಕೆಲವರು ಬ್ಯಾನರ್ ಹಾಕಿದ್ದಾರೆ. ಆದರೆ ಖಾವಂದರ ಜೊತೆ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಇದ್ದಾರೆ, ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳ ಬಂಧನವಾಗಬೇಕು, ನ್ಯಾಯ ಸಿಗಬೇಕು ಎಂದು ಸಮಾಜದ ಒಕ್ಕೋರಳ ಆಗ್ರಹವಾಗಿದೆ ಎಂದು ಘೋಷಿಸಿದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ರಥ ಬೀದಿಯಿಂದ ಉಜಿರೆ ಎಸ್.ಡಿ.ಎಂ ಕಾಲೇಜು ರಸ್ತೆ ತನಕ ಬೃಹತ್ ಜಾಥಾ ನಡೆಯಿತು. ಅಲ್ಲಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಹಾಗೂ ಶಾಸಕರಿಗೆ ಹಕ್ಕೋತ್ತಾಯದ ಮನವಿಯನ್ನು ಸಲ್ಲಿಸಲಾಯಿತು. ಸುಬ್ರಹ್ಮಣ್ಯ ಪ್ರಸಾದ್ ಧರ್ಮಸ್ಥಳ ಹಕ್ಕೊತ್ತಾಯ ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ ಮೂಡಬಿದ್ರೆ ಮಾಜಿ ಸಚಿವ ಅಭಯಚಂದ್ರ, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಜಿರೆ ಜನಾರ್ದನ ದೇವಸ್ಥಾನ ದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಂದರ ಗೌಡ ಇಚ್ಚಿಲ, ಶ್ರೀ ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ಡಾ| ಎಲ್.ಹೆಚ್ ಮಂಜುನಾಥ್, ಪ್ರತಾಪ್ ಸಿಂಹ ನಾಯಕ್ ಹಾಗೂ ಲಯನ್ಸ್ ಅಧ್ಯಕ್ಷ ಜಯರಾಜ್, ವಸಂತ ಸಾಲಿಯಾನ್, ಅನಿಲ್ ಕುಮಾರ್, ಕಾಸಿಂ ಮಲ್ಲಿಗೆ ಮನೆ ಮೊದಲಾದವರು ಉಪಸ್ಥಿತರಿದ್ದರು.