ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ವಿಮುಕ್ತಿ ಸಂಸ್ಥೆ ಲಾಯಿಲ ಇವರ ಜಂಟಿ ಸಹಯೋಗದೊಂದಿಗೆ ಮುಂಡಾಜೆ ಗ್ರಾ.ಪಂ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆ. 6 ರಂದು ನಡೆಯಿತು.
ಮುಂಡಾಜೆಯ ಹಿರಿಯ ತುಳು ಜಾನಪದ ಕಲಾವಿದೆ ಅಪ್ಪಿ ಅರಸಮಜಲು ಅವರು ಪಾಡ್ದಾನ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ದೇವಿ ಪ್ರಸಾದ್ ಮಾತನಾಡಿ, ತುಳುನಾಡಿನಲ್ಲಿ ದೇವರಿಗಿಂತ ಜಾಸ್ತಿ ದೈವಗಳ ಬಗ್ಗೆ ನಂಬಿಕೆ ಭಕ್ತಿ ಶ್ರದ್ಧೆ ಕಂಡುಬರುತ್ತದೆ. ಅಂತೆಯೇ ಆಟಿಕಳೆಂಜದಂತಹ ಧಾರ್ಮಿಕ ನಂಬಿಕೆಗಳು ಆಟಿ ತಿಂಗಳ ಜೊತೆ ಬೆಸೆದುಕೊಂಡಿದೆ. ತುಳುನಾಡಿನ ಆಹಾರ ಪದ್ದತಿ ತಿಂಗಳ ಮಹತ್ವಕ್ಕೆ ಪೂರಕವಾಗಿದೆ ಎಂದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಚಟುವಟಿಕೆ ಅನೇಕ ಪ್ರತಿಭೆಗಳ ಹುಟ್ಟಿಗೆ ವೇದಿಕೆಯಾಗಿದೆ. ಮುಂಡಾಜೆಯ ಮಣ್ಣಿನಲ್ಲೇ ಕಲೆ ಸಂಸ್ಕೃತಿ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ರಂಜಿನಿ ಮಾತನಾಡಿ, ಆಟಿಯ ಆಚರಣೆ ಈಗ ಫ್ಯಾಶನ್ ಆಗಿದೆ. ಅದರೆ ಹಿಂದೆ ಹಿರಿಯರು ಬದುಕುವ ರೀತಿಯೇ ಆಗಿತ್ತು. ಸಂಘ ಸಂಸ್ಥೆಗಳ ಮೂಲಕ ರೀತಿ ಸಾಮಾಜಿಕ ಆಚರಣೆ ಹಮ್ಮಿಕೊಳ್ಳುವುದರಿಂದ ತುಳು ಸಂಸ್ಕೃತಿ ಉಳಿಸಲು ಪ್ರೇರಣೆಯಾಗುತ್ತದೆ. ನಮ್ಮ ಮಕ್ಕಳಿಗೂ ಈ ಸಂಸ್ಕೃತಿ ದಾಟಿಸಬೇಕಿದೆ ಎಂದರು.
ವೇದಿಕೆಯಲ್ಲಿ ಯಂಗ್ ಚಾಲೆಂಜರ್ಸ್ ಅಧ್ಯಕ್ಷ ಶೀನಪ್ಪ ಗೌಡ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಶಿಧರ ಠೋಸರ್, ಪದಾಧಿಕಾರಿಗಳಾದ ಪುಷ್ಪರಾಜ್, ವಿಜಯಕುಮಾರ್, ಕೃಷ್ಣಪ್ಪ, ಸುರೇಶ್, ಕಸ್ತೂರಿ, ಶೀನ ಕಲ್ಮಂಜ, ಗ್ರಾ.ಪಂ ಸದಸ್ಯ ಜಗದೀಶ ನಾಯ್ಕ, ಸಂಘದ ಗೌರವ ಸಲಹೆಗಾರ ಅರೆಕ್ಕಲ್ ರಾಮಚಂದ್ರ ಭಟ್, ರಾಘವ ಶೆಟ್ಟಿ ನೆಯ್ಯಾಲು, ಮಹಿಳಾ ವಿಭಾಗದ ಸಂಯೋಜಕಿ ವಸಂತಿ ಸಹಕರಿಸಿದರು.
ಆಟಿಕಳೆಂಜ ಪ್ರದರ್ಶನ; ಸಹಭೋಜನ
ದಿನದ ಮಹತ್ವ ಸಾರುವ ಬಗ್ಗೆ ವಿಜಯ ಕುಮಾರ್ ಮತ್ತು ವರುಣ್ ಬಳಗದಿಂದ ಆಟಿ ಕಳೆಂಜ ಪ್ರದರ್ಶನ ಉತ್ತಮವಾಗಿ ಮೂಡಿಬಂತು. ಬಳಿಕ ತುಳುನಾಡ ಶೈಲಿಯ ಆಹಾರದ ಸಹಭೋಜನ ಏರ್ಪಡಿಸಲಾಗಿತ್ತು. ಚಲನಚಿತ್ರ ಕಲಾವಿದೆಯೂ ಆಗಿರುವ ಹಿರಿಯ ಪಾಡ್ದಾನಾ ಸಾಹಿತಿ ಅಪ್ಪಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮುಂಡಾಜೆ ಗ್ರಾ.ಪಂ ಗ್ರಂಥಾಲಯಕ್ಕೆ ಅಮೂಲ್ಯವಾದ 45 ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿ ಗ್ರಂಥ ಪಾಲಕಿ ಮಮತಾ ಸ್ವೀಕರಿಸಿದರು.
ಸಂಚಾಲಕ ಲ. ನಾಮರಾವ್ ಪ್ರಸ್ತಾವನೆಗೈದರು. ಪುಟಾಣಿ ಇಷ್ಟ ಪ್ರಾರ್ಥನೆ ಹಾಡಿದರು. ಜತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಲ. ಅಶ್ರಫ್ ಆಲಿಕುಂಞಿ ಸನ್ಮಾನಿತರ ಪರಿಚಯ ಮಾಡಿದರು.
ಚಂದ್ರಾವತಿ ಉಮೇಶ್ ಸ್ವಾಗತಿಸಿದರು. ಬಿ.ಕೆ ಶಶಿ ವಂದಿಸಿದರು.