ಪಟ್ರಮೆ: ಪಟ್ರಮೆಯ ಅನಾರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ನೊಂದ ಪೋಷಕರು ಕಳೆದ ಜುಲೈ 14 ರಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶಾಲಾ ವತಿಯಿಂದ ಹಾಗೂ ಊರಿನವರ ವತಿಯಿಂದ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಒಂದು ವಾರದೊಳಗೆ ಬದಲಿ ವ್ಯವಸ್ಥೆ ಮಾಡಿಕೊಡುವುದಾಗಿ ಅಧಿಕಾರಿಗಳು
ಭರವಸೆ ನೀಡಿದ್ದರು. ಆದರೆ ಇದುವರೆಗೂ ಅಧಿಕೃತ ಶಿಕ್ಷಕರು ಶಾಲೆಗೆ ಒದಗಿಸಿಲ್ಲ. ಇದರಿಂದ ಆಕ್ರೋಶಗೊಂಡ ಪೋಷಕರು ಆ.14ರಂದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಆ.14ರಂದು ಸಂಜೆ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಧನಂಜಯ್ ಗೌಡರವರ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ ಸಮಸ್ಯೆ ಪರಿಹಾರಗೊಳ್ಳದ ಕಾರಣ ಪೋಷಕರು ಮಕ್ಕಳನ್ನು ಆ.೧೫ರಂದು ಸ್ವಾತಂತ್ರ್ಯೋತ್ಸವ ಆಚರಣೆಗೆ ಶಾಲೆಗೆ ಕಳುಹಿಸದೇ ಇದ್ದ ಕಾರಣ ಶಾಲಾ ಶಿಕ್ಷಕರು, ಪಂಚಾಯತ್ ಅಧ್ಯಕ್ಷ ಮನೋಜ್, ಸದಸ್ಯರು, ಗ್ರಾಮಸ್ಥರು ಸೇರಿ ಸ್ವಾತಂತ್ರ್ಯೋತ್ಸವ ಆಚರಿಸಿದರು.