ಮಂಗಳೂರು: ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ ಕಡಬ ತಾಲೂಕಿನ ವ್ಯಕ್ತಿಯೊಬ್ಬರು ಬ್ಯಾಂಕ್ ಖಾತೆ ಹ್ಯಾಕರ್ ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಅಲ್ಲಿ ಬಂದಿಯಾಗಿದ್ದು, ಅವರ ಬಿಡುಗಡೆಗಾಗಿ ಕುಟುಂಬಸ್ಥರು ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ.
ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ತಪ್ಪು ಮಾಡದೆ ರಿಯಾದ್ ನಲ್ಲಿ ಜೈಲಲ್ಲಿರುವವರು. ಅವರ ಕುಟುಂಬದ ಪರವಾಗಿ ನಿಕಟ ವರ್ತಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಮಂಗಳೂರಿನ ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರು ಆ.17 ರಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಪದೋನ್ನತಿ ಮೂಲಕ ಸೌದಿ ಅರೇಬಿಯಾಕ್ಕೆ 2022ರಲ್ಲಿ ಕಂಪೆನಿ ಕೆಲಸಕ್ಕೆ ತೆರಳಿದ್ದರು. ಅಲ್ಲಿ ಅಲ್ಪಾನ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿದ್ದರು. ನವೆಂಬರ್‌ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್ ಅಂಗಡಿಗೆ ಭೇಟಿ ನೀಡಿದ್ದರು. ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು ಸಹಿ ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ಸಂಖ್ಯೆ ತಿಳಿಸುವಂತೆ ಸೂಚಿಸಿದಾಗ ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಇವರನ್ನು ಬಂಧಿಸಿದ್ದರು.
ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ 22 ಸಾವಿರ ರಿಯಲ್ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಈ ಹಣ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಅವರ ಜಮೆಯಾಗಿರುವುದನ್ನು ಖಾತೆಗೆ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದು, ಬಂಧಿಸಲಾಗಿದೆ.
ಈ ಬಗ್ಗೆ ದ.ಕ ಜಿಲ್ಲೆ ಮತ್ತು ರಾಜ್ಯದ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಪ್ರಜ್ಞಾವಂತ ನಾಗರೀಕರು ಕೇಂದ್ರ ಸರಕಾರದ ಜೊತೆಗೆ ಚಂದ್ರಶೇಖರ್ ರವರಿಗೆ ನ್ಯಾಯವನ್ನು ಆಗ್ರಹಿಸಿ ಪತ್ರ ವ್ಯವಹಾರ ನಡೆಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಈ ರೀತಿಯ ಹ್ಯಾಕರ್ ಗಳ ಬಲೆಗೆ ತರುಣರು ಬೀಳದಂತೆ ಜಾಗೃತಿಯನ್ನು ಮೂಡಿಸಬೇಕು ಎಂದು ತಿಳಿಸಿದರು.