ಬೆಳ್ತಂಗಡಿ : ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ-ಸ್ಪರ್ಶ ಕಾರ್ಯಕ್ರಮ ಹಾಗೂ ಕಾನ್ಫರೆನ್ಸಾ ಎಪಿಸ್ಕೋಪಾಲೆ ಇಟಾಲಿಯಾನ ಇವರ ಆಶ್ರಯದಲ್ಲಿ ಸೆ.4 ರಂದು ಪೌಷ್ಟಿಕ ಆಹಾರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮವು ಬೈಂದೂರು ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು, ಶ್ರೀ. ಮೂಕಾಂಬಿಕಾ ದೇವಳದ ಪ್ರೌಢಶಾಲೆ ಬೀಸಿನಪಾರೆ, ಅಂಗನವಾಡಿ ಕೇಂದ್ರ ಕೊರಾಡಿ ಹಾಗೂ ಮುದೂರಿನ ದುಡ್ಡಿನಗುಳಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ಹಾಗೂ ಉತ್ತಮ ಪೌಷ್ಟಿಕ ಆಹಾರ ತಯಾರಿಸಿದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಶಾಲೆ ಹಾಗೂ ಅಂಗನವಾಡಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶಿಶು ಅಭಿವೃದ್ಧಿ ಯೋಜನೆಯಿಂದ ಮಂಜುನಾಥ್ ಹಾಗೂ ಮುದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಕುಮಾರಿ ಸುನೀತಾ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜಡ್ಕಲ್ ಹಾಗೂ ಮುದೂರು ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಜಿನ್ಸ್ ಕೊಲಕುನ್ನೇಲ್ ಹಾಗೂ ವಂದನೀಯ ಫಾ. ಆಗಸ್ಟಿನ್ ಪೊಟ್ಟಂಕುಳಂಗರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ, ಬಾಲವಿಕಾಸ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸ್ವ- ಸಹಾಯ ಸಂಘಗಳ ಮಹಿಳೆಯರು, ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡ ಉದ್ದೇಶದ ಬಗ್ಗೆ ವಿವರಿಸಿದರು. ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ಮುತ್ತು ಮೊಗವೀರ, ಶ್ರೀಮತಿ ಸರೋಜ, ಶ್ರೀಮತಿ ಪುಷ್ಪಲತಾ ಹಾಗೂ ಶ್ರೀಮತಿ ಸೋನಿಯಾ ನಿಕ್ಸನ್ ಹಾಗೂ ಸಂಸ್ಥೆಯ ಸಂಯೋಜಕರಾದ ಸುನಿಲ್ ಗೊನ್ಸಾಲ್ವಿಸ್ ಹಾಗೂ ತೋಮಸ್ ಪುಳಿಕ್ಕೆಲ್ ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಒಟ್ಟು 483 ಮಂದಿ ಉಪಸ್ಥಿತರಿದ್ದರು.