ಶಿಶಿಲ : ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಸರಕಾರಿ ಮೀಸಲು ಅರಣ್ಯದಿಂದ ಮರಕಳ್ಳತನ ನಡೆಸಿದ ಓರ್ವನನ್ನು ಅರಣ್ಯಾಧಿಕಾರಿಗಳ ತಂಡ ಸೆ.5 ರಂದು ಬಂಧಿಸಿದ್ದಾರೆ.
ಧರ್ನಪ್ಪ ಗೌಡ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಇನ್ನೋರ್ವ ಆರೋಪಿ ಅಜಿತ್ ಪರಾರಿಯಾಗಿದ್ದಾನೆ ಎಂದು ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ತಿಳಿಸಿದ್ದಾರೆ.
ಸೆ. 5ರಂದು ಮಧ್ಯಾಹ್ನ ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಕಾಡಿನಲ್ಲಿ ಬೇಂಗ ಮರವೊಂದನ್ನು ಕಡಿದು, ಅದನ್ನು ದಿಮ್ಮಿಗಳನ್ನಾಗಿ ಮಾಡುತ್ತಿದ್ದಾಗ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ, ಮರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಪಡಿಸಿಕೊಂಡ ಮರದ ಮೌಲ್ಯ ಒಂದು ಲಕ್ಷದ 26 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಪ್ರಶಾಂತ್, ಭರತ್, ಅರಣ್ಯ ಪಾಲಕ ಸನತ್, ವಿನಯಚಂದ್ರ, ರಾಜೇಶ್, ಲಿಂಗಪ್ಪ, ಸುನೀಲ್ ನಾಯ್ಕ ಹಾಗೂ ಜೀಪು ಚಾಲಕ ಕಿಶೋರ್ ಭಾಗವಹಿಸಿದ್ದರು.