ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ

Suddi Udaya

ಉಜಿರೆ : ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ, 19 ವರ್ಷದ ಯುವಕನಿಗೆ ಸೆ. 4ರಂದು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ ಬೆನ್ನುಮೂಳೆಯ ಕಾರ್ಯವಿಧಾನವಾಗಿದ್ದು, ಇದು ಬೆನ್ನುಮೂಳೆಯ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಾಗಿದೆ. ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ ಹೆಚ್.ಡಿ ಕ್ಯಾಮರವನ್ನು ಬಳಸಲಾಗುತ್ತದೆ. ಈ ಸರ್ಜರಿಯಲ್ಲಿ ಅತೀ ಸಣ್ಣ ಗಾಯ, 6 ಗಂಟೆಯಲ್ಲಿ ರೋಗಿ ನಡೆದಾಡಬಹುದು. ರೋಗಿಗೆ ಕಡಿಮೆ ರಕ್ತದ ನಷ್ಟ ಹಾಗೂ ಅತೀ ಕಡಿಮೆ ನೋವು ಉಂಟಾಗುತ್ತದೆ. ಅತೀ ಕಡಿಮೆ ಅವಧಿಯಲ್ಲಿ ರೋಗಿ ಚೇತರಿಸಿಕೊಳ್ಳುತ್ತಾನೆ.


ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ, ಕೈರೋದ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಮಾಡ್ಯೂಯಲ್ ಸೆಂಟರ್‌ನಲ್ಲಿ ಸರ್ಜನ್ ಆಗಿರುವ, 3೦೦೦ಕ್ಕಿಂತಲೂ ಹೆಚ್ಚು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವ ಖ್ಯಾತ ಬೆನ್ನುಮೂಳೆ ಶಸ್ತ್ರಚಿಕಿತ್ಸಕ ಡಾ| ಮಹೇಶ್. ಕೆ ಹಾಗೂ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ಶತಾನಂದ ಪ್ರಸಾದ್ ರಾವ್ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಅರೆವಳಿಕೆ ತಜ್ಞರಾದ ಡಾ| ಚೈತ್ರ. ಆರ್ ಸಹಕರಿಸಿದರು.


ಈಗಾಗಲೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೀ ಹೋಲ್ ಸರ್ಜರಿ, ವಿಶೇಷ ಗಾತ್ರದ ಹಲವಾರು ಗರ್ಭಕೋಶದ ಗೆಡ್ಡೆಯ ಶಸ್ತ್ರಚಿಕಿತ್ಸೆ, ಗರ್ಭಕಂಠದ ಶಸ್ತ್ರಚಿಕಿತ್ಸೆ, ಆರ್ಥೋ ಸರ್ಜರಿ, ಸಂಪೂರ್ಣ ಮಂಡಿ ಬದಲಿ ಜೋಡಣಾ ಚಿಕಿತ್ಸೆ, ಸೊಂಟದ ಕೀಲು ಬದಲಿ ಜೋಡಣಾ ಚಿಕಿತ್ಸೆ ನಡೆಸಲಾಗುತ್ತಿದೆ. ಹೈಟೆಕ್ ಆಸ್ಪತ್ರೆಗಳಲ್ಲಿ ದೊರೆಯುವ ವೈದ್ಯಕೀಯ ಸೇವೆ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಗ್ರಾಮೀಣ ಜನತೆಗೆ ಮಿತದರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವಂತೆ ಮಾಡಿದ ಕೀರ್ತಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರದ್ದು ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.


ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ-ಮೂಗು-ಗಂಟಲು ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಕಣ್ಣಿನ ತಜ್ಞರು, ಮಕ್ಕಳರೋಗ ತಜ್ಞರು, ಚರ್ಮರೋಗ ತಜ್ಞರು, 4 ಮಂದಿ ಎಂ.ಡಿ ಪಿಸಿಷಿಯನ್, 3 ಮಂದಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, 3 ಮಂದಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಇಬ್ಬರು ಅರೆವಳಿಕೆ ತಜ್ಞರು ಸದಾ ಲಭ್ಯವಿರುತ್ತಾರೆ. 16 ಮಂದಿ ಸಂದರ್ಶನ ವೈದ್ಯರು ನಿಗದಿತ ದಿನಗಳಲ್ಲಿ ಲಭ್ಯವಿರುತ್ತಾರೆ ಎಂದು ಅವರು ತಿಳಿಸಿದರು.

Leave a Comment

error: Content is protected !!