ಬೆಳ್ತಂಗಡಿ: ಏಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವಾದ ಸೆ.8 ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಮೊಂತಿ ಫೆಸ್ತ್(ತೆನೆ ಹಬ್ಬ)ವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ಚರ್ಚ್‌ನ ಧರ್ಮಗುರುಗಳಾದ ರೆ|ಫಾ ವಾಲ್ಟರ್ ಡಿ’ಮೊಲ್ಲೋ ನೇತೃತ್ವದಲ್ಲಿ ಭತ್ತದ ತೆನೆಗಳಿಗೆ ವಿಶೇಷ ಪೂಜೆ ನಡೆಯಿತು. ನಂತರ ಅಲ್ಲಿಂದ ಅಲಂಕೃತ ವಾಹನದಲ್ಲಿ ಬೆಳ್ತಂಗಡಿ ಮುಖ್ಯ ಪೇಟೆಯ ಮೂಲಕ ಚರ್ಚ್ ರೋಡಿಗಾಗಿ ತೆನೆಯನ್ನು ಮೆರವಣಿಗೆ ಮೂಲಕ ಚರ್ಚ್‌ಗೆ ತರಲಾಯಿತು. ಚರ್ಚ್‌ನಲ್ಲಿ ಹಬ್ಬದ ಬಲಿ ಪೂಜೆ ನಡೆದು ಧರ್ಮಗುರುಗಳು ಹೊಸ ತೆನೆಯ ಆಶೀರ್ವಚನ ನೆರವೇರಿಸಿದರು.
ಬಳಿಕ ಪ್ರತಿಯೊಬ್ಬರ ಮನೆಗೂ ಭತ್ತದ ತೆನೆಗಳನ್ನು ವಿತರಿಸಲಾಯಿತು. ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಂಧುಗಳು, ಚರ್ಚ್ ಆಡಳಿತ ಮಂಡಳಿಯ ಸದಸ್ಯರು, ಮಕ್ಕಳು, ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಪೂರ್ವಭಾವಿಯಾಗಿ ಒಂಭತ್ತು ದಿನಗಳ ಕಾಲ ನಡೆದ ನೊವೆನಾ ಪ್ರಾರ್ಥನೆಯಲ್ಲಿ ಮಕ್ಕಳು ಪ್ರತಿದಿನ ಮನೆಗಳಿಂದ ಹೂವುಗಳನ್ನು ಕೊಂಡೊಯ್ದು ಅರ್ಪಿಸಿರುವುದು ವಿಶೇಷವಾಗಿದೆ.