ಬೆಳ್ತಂಗಡಿ: ಇಂದು ಮಧ್ಯಾಹ್ನ ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಮೂರು ಮರಗಳು ಉರುಳಿ ಬಿದ್ದು ಸುಮಾರು ಎರಡು ತಾಸಿಗಿಂತ ಅಧಿಕ ಸಮಯ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಟ ನಡೆಸಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಗಾಳಿಗೆ ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ಬೃಹತ್ ಗಾತ್ರದ ಮರ,ಸಮೀಪದ ಇನ್ನೆರಡು ಮರಗಳೊಂದಿಗೆ ರಸ್ತೆಗೆ ಉರುಳಿ ಬಿತ್ತು.
ಇದರಿಂದ ಘಾಟಿ ಪ್ರದೇಶದಲ್ಲಿ ಸುಮಾರು 2 ಗಂಟೆಗಿಂತ ಅಧಿಕ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು. ಘಾಟಿಯ ಇಕ್ಕೆಲಗಳಲ್ಲಿ ನಾಲ್ಕಾರು ಕಿಲೋಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸರು,ಅರಣ್ಯ ಇಲಾಖೆ,ಚಾರ್ಮಾಡಿ ಹಸನಬ್ಬ ಮತ್ತು ತಂಡ, ಇಸ್ಮಾಯಿಲ್, ಮುಬಶೀರ್ ಪ್ರಜ್ವಲ್, ಕೆವಿ.ಗೌಡ ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ನಿರಂತರ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.