ಮುಂಡಾಜೆ ಅನುದಾನಿತ ಪ್ರೌಢಶಾಲೆಯ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಮುಂಡಾಜೆ : “ಶಿಕ್ಷಣದ ಕೊರತೆಯು ಕೆಲವೊಂದು ನಕಾರಾತ್ಮಕ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಮಕ್ಕಳಿಗೆ ದೇಶ, ಧರ್ಮ, ಸಂಸ್ಕೃತಿಯ ಬಗ್ಗೆ ನೀಡುವ ಶಿಕ್ಷಣವು ಅವರ ಭವಿಷ್ಯವನ್ನು ರೂಪಿಸುವುದರೊಂದಿಗೆ ರಾಷ್ಟ್ರದ ಸುಭದ್ರ ಅಡಿಪಾಯಕ್ಕೆ ಕಾರಣವಾಗುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅವರು ಅ. 20 ರಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನ ಶಿಕ್ಷಣ ಸಂಸ್ಥೆ ಮುಂಡಾಜೆ ಅನುದಾನಿತ ಪ್ರೌಢ ಶಾಲೆಗೆ ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾ ನಗರ, ಸಂಘ -ಸಂಸ್ಥೆ ಹಾಗೂ ದಾನಿಗಳ ಸಹಕಾರದಲ್ಲಿ ನಿರ್ಮಾಣಗೊಳ್ಳಲಿರುವ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


“ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು ಮಕ್ಕಳಿಗೆ ಚಿಂತನೆಗಳ ಜತೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತವೆ. ನಾವು ಯಾವುದೇ ಸಾಧನೆ ಮಾಡಬೇಕಾದರೆ ನಮ್ಮತನವನ್ನು ಗಟ್ಟಿಪಡಿಸಿಕೊಂಡು ಮುಂದುವರಿಯಬೇಕು.ಮಾನವೀಯತೆಯೊಂದಿಗೆ ನಿತ್ಯ ನೂತನವಾಗಿ ಸಂಸ್ಕೃತಿ, ಸಂಪ್ರದಾಯವನ್ನು ಪಾಲಿಸಿಕೊಳ್ಳಬೇಕು. ಇಂದು ನಮ್ಮ ದೇಶದ ವಿಜ್ಞಾನಿಗಳು ಯಾವುದೇ ಸವಾಲುಗಳಿಗೆ ಹೊಸ ಸಾಧನೆಗಳ ಮೂಲಕ ಉತ್ತರ ನೀಡುತ್ತಾ ಸ್ಪೂರ್ತಿ ತುಂಬಿಸುತ್ತಿದ್ದಾರೆ” ಎಂದು ಹೇಳಿದರು.


ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ “ಮಕ್ಕಳಲ್ಲಿ ನೈತಿಕ ಮಟ್ಟ ಹೆಚ್ಚಿಸುವ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಬೇಕು. ಕುಟುಂಬ ಪದ್ಧತಿ, ಜೀವನ ಮೌಲ್ಯಗಳನ್ನು ಪಾಲಿಸಿಕೊಂಡು ಉನ್ನತ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು. ಇಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಈಗಾಗಲೇ ಎಂಎಲ್ ಸಿ ನಿಧಿಯಿಂದ 10 ಲಕ್ಷ ರೂ.ಅನುದಾನ ನೀಡಿದ್ದು,ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು” ಎಂದರು.


ಶಿಲಾನ್ಯಾಸ ನೆರವೇರಿಸಿದ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ ಮಾತನಾಡಿ “ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳು ಕೈಜೋಡಿಸುವುದು ಮಾದರಿ ಕಾರ್ಯವಾಗಿದೆ. ಫಲಾಪೇಕ್ಷೆ ಇಲ್ಲದ ಸಹಕಾರ ಇತರರ ಬಾಳಿಗೆ ದಾರಿದೀಪವಾಗುತ್ತದೆ” ಎಂದರು.


ಸಹಾಯಕ ಗವರ್ನರ್ ಡಾ. ರಮೇಶ್,ವಲಯ ಸೇನಾನಿ ಯಶವಂತ ಪಟವರ್ಧನ್, ಮಾಜಿ ಅಧ್ಯಕ್ಷೆ ಮನೋರಮಾ ಭಟ್, ಮಾಜಿ ಕಾರ್ಯದರ್ಶಿ ರಕ್ಷಾ ರಾಗ್ನೇಶ್,ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು,
ಮುಂಡಾಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯ ಚಂದ್ರ ಸಂಚಾಲಕ ನಾರಾಯಣಗೌಡ, ಶಾಲಾ ವಿಭಾಗಗಳ ಮುಖ್ಯಸ್ಥರಾದ ಜಾಲಿ ಡಿಸೋಜಾ, ಜಯಂತಿ, ಚಂದ್ರಮತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.


ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಸ್ವಾಗತಿಸಿದರು. ಉಪನ್ಯಾಸಕ ಡಾ.ರವಿ ಮಂಡ್ಯ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಫಡಕೆ ವಂದಿಸಿದರು.

Leave a Comment

error: Content is protected !!