ಬೆಳ್ತಂಗಡಿ : ಬೆಳ್ಳಾರೆಯ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಸುಳಿವು ನೀಡಿದವರಿಗೆ ಎರಡು ಲಕ್ಷ ರೂ. ಘೋಷಣೆ ಮಾಡಿ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
2022 ಜುಲೈ 26 ರಂದು ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತ ಆರೋಪಿ ನಂಬರ್ 23 ಅಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷದ್(32ವ) ಎಂಬಾತ, ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಹಿನ್ನೆಲೆಯಲ್ಲಿ ಎನ್.ಐ.ಎ ಅಧಿಕಾರಿಗಳು ಈ ಮೊದಲೇ ಪಡಂಗಡಿಯಲ್ಲಿರುವ ಮನೆಗೆ ದಾಳಿ ಮಾಡಿದ್ದರು. ಈ ವೇಳೆ ನೌಷದ್ ಪ್ರಕರಣ ನಡೆದ ಬಳಿಕ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಎನ್.ಐ.ಎ ಅಧಿಕಾರಿಗಳು ನೋಟಿಸ್ ನೀಡಿ ಹೋಗಿದ್ದರು.
ಇದೀಗ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ನೌಷದ್ ಬಗ್ಗೆ ಸುಳಿವು ನೀಡಿದವರಿಗೆ ಎನ್.ಐ.ಎ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಲ್ಲಿ ಮಾಹಿತಿ ಗೌಪ್ಯವಾಗಿಟ್ಟು ಆ ವ್ಯಕ್ತಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿರುವುದಾಗಿ ಎನ್.ಐ.ಎ ಪತ್ರಿಕಾ ಪ್ರಕರಣೆ ಹೊರಡಿಸಿದ್ದಾರೆ.