ಉಜಿರೆ: ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬೆಳ್ತಂಗಡಿ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೊದ್ಯೋಗ ಸಂಸ್ಥೆ(ರಿ) ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನ.25 ರಂದು ಉಜಿರೆ ಸಿರಿ ಕೇಂದ್ರ ಕಛೇರಿಯಲ್ಲಿ ಜರುಗಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಬೆಳ್ತಂಗಡಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಸಂದೇಶ್ ಕೆ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ತಡೆಗಟ್ಟುವಿಕೆ ಮತ್ತು ಕಾನೂನು ಜಾಗೃತಿ ಮೂಡಿಸುವ ಕುರಿತು ಸಿರಿ ಸಿಬ್ಬಂದಿಗಳಿಗೆ ಸವಿವರವಾದ ಮಾಹಿತಿ ನೀಡಿದರು.
ಬೆಳ್ತಂಗಡಿಯ ನ್ಯಾಯವಾದಿ ಶ್ರೀಮತಿ ಸ್ವರ್ಣಲತಾ ಎ. ರವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕೆಲಸದ ಸ್ಥಳದಲ್ಲಿ ಮಹಿಳಾ ಸಿಬ್ಬಂದಿಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳ, ಇದರಿಂದ ಮಹಿಳೆಯರು, ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಮಾನಸಿಕ ಕಿರಿಕಿರಿ ಮತ್ತು ಈ ಪರಿಸ್ಥಿತಿಯನ್ನು ಎದುರಿಸುವ ಪರಿಹಾರೋಪಾಯಗಳು ಹಾಗೂ ಕಾನೂನಿನಡಿ ಇದಕ್ಕೆ ಯಾವ ರೀತಿಯ ಶಿಕ್ಷೆ ಅನ್ವಯವಾಗುತ್ತದೆ ಎಂಬ ಕುರಿತು ಸಿರಿ ಸಿಬ್ಬಂದಿಗಳಿಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರಸನ್ನ ಯು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿರಿ ಸಂಸ್ಥೆಗೆ ಆಗಮಿಸಿ ಲೈಂಗಿಕ ಕಿರುಕುಳದಂತಹ ನಡವಳಿಕೆಯನ್ನು ಗುರುತಿಸಲು ಹಾಗೂ ಅನುಚಿತ ವರ್ತನೆಯನ್ನು ತಡೆಗಟ್ಟಲು ಕಾನೂನಾತ್ಮಕವಾಗಿ ಪರಿಹಾರದ ಕುರಿತು ಸಿರಿ ಸಿಬ್ಬಂದಿಗಳಿಗೆ ಸ್ವಯಂ ಅರಿವು ಮೂಡಿಸಿದ ನ್ಯಾಯಾಧೀಶರುಗಳು ಹಾಗೂ ನ್ಯಾಯವಾದಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಹೆಚ್, ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ವಸಂತ ಮರಕಡ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಉಪಸ್ಥಿತರಿದ್ದು, ಸಿರಿ ಸಿಬ್ಬಂದಿಗಳಿಗೆ ಉಪಯುಕ್ತವಾದ ಕಾನೂನು ಮಾಹಿತಿ ನೀಡಿದರು.
ಸಿರಿ ಸಂಸ್ಥೆಯ ಗೋದಾಮು ಪ್ರಬಂಧಕರಾದ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಿರಿ ಸಿಬ್ಬಂದಿ ಶ್ರೀಮತಿ ವಸಂತಿ ಧನ್ಯವಾದವಿತ್ತರು.