ಇಳಂತಿಲ: ಅಭಿವೃದ್ಧಿ ಕಾಮಗಾರಿ ಆರಂಭಿಸಿದ ಹಂತದಲ್ಲಿಯೇ ರಾಜ್ಯ ಸರಕಾರ ಕಾಮಗಾರಿಗೆ ತಡೆ ನೀಡಿದೆ ಎಂದು ಆರೋಪಿಸಿ ಇಳಂತಿಲ ಗ್ರಾಮದ ಕಂಗಿನಾರುಬೆಟ್ಟಿನಲ್ಲಿ ನ.27ರಂದು ಪ್ರತಿಭಟನೆ ನಡೆಯಿತು.
ಈ ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ಬನ್ನೆಂಗಳದಿಂದ ಕಂಗಿನಾರುಬೆಟ್ಟು ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿತ್ತು. ಆದರೆ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೆ ಈ ಕಾಮಗಾರಿಯನ್ನು ತಡೆಹಿಡಿದಿರುವುದು ಅಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಬಿಜೆಪಿ ಪ್ರಮುಖರಾದ ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್ ಮಾತನಾಡಿ, ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಬಿಜೆಪಿ ಸರಕಾರ ಕೊನೆಗಳಿಗೆಯಲ್ಲಿ ಅನುದಾನ ಬಿಡುಗಡೆಗೊಳಿಸಿತ್ತು. ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಕಾಮಗಾರಿ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್ ಸರಕಾರ ರಾಜಕೀಯ ಮಾಡಿರುವುದು ಸರಿಯಲ್ಲ, ಅಭಿವೃದ್ಧಿಯಲ್ಲಿ ಸ್ಪಂದಿಸಲಿ. ಅಲ್ಲದೆ ಈ ಭಾಗದ ಜನರು ರಸ್ತೆಯಲ್ಲಿ ನಡೆಯಲಾಗದ ಆ ಸ್ಥಿತಿ ನಿರ್ಮಾಣವಾಗಿದ್ದು ಮುಂದಿನ 15 ದಿನಗಳ ಒಳಗೆ ಮತ್ತೆ ಕಾಮಗಾರಿ ನಡೆಸಲು ಅನುವು ಮಾಡಬೇಕು ಎಂದರು.
ಎ.ಪಿ.ಎಂ.ಸಿ. ಮಾಜಿ ಸದಸ್ಯ ಜಯನಂದ ಕಲ್ಲಾಪು ಮಾತನಾಡಿ, ತೀರಾ ಕೆಟ್ಟು ಹೋದ ರಸ್ತೆಯಲ್ಲಿ ಶಾಲಾ ಮಕ್ಕಳ ಸಹಿತ ವೃದ್ದರು ನಡೆದಾಡಲು ಅಸಾಧ್ಯವಾಗಿದೆ. ಅನುದಾನ ಬಿಡುಗಡೆಗೊಳಿಸಿ ಗುತ್ತಿಗೆದಾರರು ರಸ್ತೆಗೆ ಜಲ್ಲಿಕಲ್ಲು ಹಾಸಿದ ಬೆನ್ನಲ್ಲೆ ಕಾಮಗಾರಿ ತಡೆ ಹಿಡಿದಿರುವುದು ವಿಷಾದನೀಯ. ಈ ಕುರಿತು ಶಾಸಕರನ್ನು ಸಂಪರ್ಕಿಸಿ ಮನವರಿಕೆ ಮಾಡುವ ಭರವಸೆ ನೀಡಿದರು.
ಗ್ರಾ.ಪಂ.ದ ಅಧ್ಯಕ್ಷ ತಿಮ್ಮಪ್ಪಗೌಡ ಮಾತನಾಡಿದರು. ತಮ್ಮ 5 ಮನವಿಯನ್ನು ತತ್ ಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವಸಂತ, ರಾಜೇಶ, ಮಂಜುನಾಥ, ಜಯಂತ, ರಾಘವೇಂದ್ರ, ನಾಗರಾಜ, ಪುರುಷೋತ್ತಮ, ರವಿಚಂದ್ರ, ಧನಂಜಯ, ಯತೀಶ, ಆನಂದ, ಬೇಬಿ, ಉಗ್ಗಪ್ಪ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ನಡೆಸಿದ್ದರು.