ಬೆಳ್ತಂಗಡಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಜೊತೆಗೆ ಕ್ರೀಡೆ ಹಾಗೂ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶ ಸಿಗುತ್ತಿದೆ.ಇನ್ನು ಇನ್ನಿತರ ಮೂಲ ಸೌಕರ್ಯಗಳನ್ನು ಗ್ರಾಮಸ್ಥರು ಸಂಘ ಸಂಸ್ಥೆಗಳು ನೀಡಿದಾಗ ಶಾಲೆಯ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ. ಕಾಪಿನಡ್ಕದ ಗೆಳೆಯರ ಬಳಗ ತಂಡವು ಇಲ್ಲಿನ ಶಾಲೆಯ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದು ಇದರಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಯಾಗುತ್ತಿದೆ. ಇದೇ ರೀತಿ ಎಲ್ಲಾ ಸಂಘ ಸಂಸ್ಥೆಗಳು ಸರಕಾರಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್ ಹೇಳಿದರು.
ಅವರು ಡಿ.2ರಂದು ಸ.ಕಿ.ಪ್ರಾಥಮಿಕ ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ ರಜತಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ ನಡೆಯುವ 65 ಕೆಜಿ ವಿಭಾಗದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ತಾ.ಪಂ. ಸದಸ್ಯ ಧರ್ಣಪ್ಪ ಪೂಜಾರಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಜ್ಞಾನ ಸಂಪಾದನೆಯನ್ನು ಮಾಡಿದಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ.ಸರಕಾರಿ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಹುದ್ದೆಯಲ್ಲಿ ಇದ್ದಾರೆ. ಇದಕ್ಕೆ ಸರಕಾರಿ ಶಾಲೆಯ ಗುಣಮಟ್ಟದ ಶಿಕ್ಷಣವೇ ಕಾರಣ ಎಂದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಶಾಲೆಯ ಮೇಲೆ ಅಭಿಮಾನವನ್ನಿಟ್ಟು ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾನ್ವಿತರಾಗಲು ಸಾದ್ಯವಾಗುತ್ತದೆ.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಜಗದೀಶ್ ರೈ ಹಾನಿಂಜ, ತಿಮ್ಮಪ್ಪ ಪೂಜಾರಿ ನಿಟ್ಟಡ್ಕ, ಸತೀಶ್ ರೈ ಬಾರ್ದಡ್ಕ, ಉದ್ಯಮಿ ವಲೇರಿಯನ್ ಡಿ’ಸೋಜ,
ಡಾ. ತುಳುಪುಳೆ, ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ವ್ಯವಸ್ಥಾಪಕ ಸುಧೀರ್ ಸುಲ್ಕೇರಿ, ಪತ್ರಕರ್ತ ಮನೋಹರ್ ಬಳಂಜ, ಬಳಂಜ ಗ್ರಾಮ ಪಂಚಾಯತ್ ಸದಸ್ಯೆ ಪದ್ಮಾವತಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುರೇಶ್ ಪೂಜಾರಿ, ಗೆಳೆಯರ ಬಳಗದ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಲೋಕೇಶ್ ಗೌಡ, ಶಾಲಾ ನಾಯಕಿ ಅನ್ವಿತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಕೇಶ್ ಪೂಜಾರಿ ಉಪಸ್ಥಿತರಿದ್ದರು.
ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯಿನಿ ಶಾಂತಿ ವಾಸ್ ಸ್ವಾಗತಿಸಿ ಶಿಕ್ಷಕಿ ಅನಿತಾ ವಂದಿಸಿದರು. ಇಂದು ಶೇಖರ್ ಕಾರ್ಯಕ್ರಮ ನಿರೂಪಿಸಿದರು.ಸಂತೋಷ್ ಕುಮಾರ್ ಕಾಪಿನಡ್ಕ,ಪ್ರದೀಪ್ ಮೈಂದಕುಮೇರ್ ಸಹಕರಿಸಿದರು.