ಬೆಳ್ತಂಗಡಿ: ಬೆನ್ನುಹುರಿ ಅಪಘಾತಕ್ಕೆ ಒಳಾಗದವರಿಗೆ ರೂ. 5 ಸಾವಿರ ಮಾಸಾಶನ ನೀಡುವಂತೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಹರೀಶ್ ಕುಮಾರ್ ಅವರು ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ಇದ್ದಾರೆ. ಅವರ ಬದುಕು ಬಹಳ ಕಷ್ಟಕರವಾಗಿದೆ. ನಡೆದುಕೊಂಡು ಹೋಗಲು ಸಾಧ್ಯವಿಲ್ಲದೆ ವೀಲ್‌ಚೇರ್ ಮೂಲಕ ಓಡಾಡಬೇಕು. ಅವರಿಗೆ ಆದಾಯ ಇಲ್ಲ. ಸಹಾಯಕ ಒಬ್ಬರು ಬೇಕು. ಆದ್ದರಿಂದ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಐದು ಸಾವಿರ ರೂಪಾಯಿ ಮಾಸಾಶನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸಲಹಾ ಸಮಿತಿಯ ಅವಧಿ ಮುಗಿದಿದೆ. ಹೊಸ ಸಮಿತಿಯನ್ನು ರಚಿಸಬೇಕು. ಸಮಿತಿಯಲ್ಲಿ ಆಸಕ್ತಿ ಉಳ್ಳ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿ ಸಮಿತಿಯನ್ನು ಶೀಘ್ರವೇ ರಚಿಸಬೇಕು.ಮಾನಸಿಕ ಅಸ್ವಸ್ಥರಿಗೆ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಔಷಧ ಮತ್ತು ಆಪ್ತ ಸಮಾಲೋಚನೆಗೆ ವ್ಯವಸ್ಥೆಯಾಗಬೇಕು. ಬೆನ್ನುಹುರಿಯಾದವರಿಗೆ ಯೂರಿನಲ್ ಬ್ಯಾಗ್‌ನ್ನು ತಿಂಗಳಿಗೊಮ್ಮೆ ಬದಲಾವಣೆ ಮಾಡಲು 1400 ರೂಪಾಯಿ ಭತ್ತೆಯನ್ನು ನೀಡುತ್ತಿದ್ದು ಅವರು ಅದನ್ನು ಬದಲಾಯಿಸಲು ಹಾಗೂ ಹೋಗಿ ಬರಲು ವಾಹನದ ವೆಚ್ಚ ಭರಿಸಿದಾಗ ಈ ಹಣ ಸಾಕಾಗುವುದಿಲ್ಲ. ಅವರ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಮಾಸಾಶನ ನೀಡಬೇಕು. ರಾಜ್ಯದಲ್ಲಿ ನಾಲ್ಕು ವಿಭಾಗ ಕೇಂದ್ರದಲ್ಲಿ ಚಿಕಿತ್ಸಾ ಕೇಂದ್ರವನ್ನು ತೆರೆಯಬೇಕು. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಕಲಚೇತನ ಮಕ್ಕಳು ಶಾಲೆಗೆ ಹೋಗುತ್ತಿದ್ದು ಅವರಿಗೆ ಬೋಧನಾ ಮತ್ತು ಕಲಿಕಾ ಸಾಮಾಗ್ರಿಗಳನ್ನು ಸರಕಾರ ಉಚಿತವಾಗಿ ನೀಡಬೇಕು.
ಸರಕಾರ ಇದಕ್ಕೆ ಎನ್.ಜಿ.ಓ.ಗಳ ಸಹಾಯ ಪಡೆಯಬಹುದು ಎಂದು ಹರೀಶ್ ಕುಮಾರ್ ಹೇಳಿದರು. ಪ್ರತಿಕ್ರಿಯೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆನ್ನುಹುರಿ ಅಪಘಾತ ಆದ ವಿಕಲಾಂಗರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಘಟಕಗಳಿದೆ. ವಿಕಲಚೇತನ ಸೌಲಭ್ಯ ಒದಗಿಸುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಗಬೇಕು ಎಂದು ಹೇಳಿದರು.